ಶ್ರಮಜೀವಿಗಳ ಬೆವರು ಕಸಿಯುವ ಪ್ರಭುತ್ವ ಸೋಲಬೇಕು

h1-pattar
Published on

ಹುಬ್ಬಳ್ಳಿ: ಈ ಭೂಮಿ ನಳನಳಿಸಲು ಹೇಗೆ ನಿತ್ಯ ಸೂರ್ಯನ ಬೆಳಕಿನ ಕಿರಣಗಳು ಅನಿವಾರ್ಯವೋ ಹಾಗೆ ಈ ಸಮಾಜದ ಚಲನೆ ನಿರಂತವಾಗಿರಬೇಕಾದರೆ ಕಾರ್ಮಿಕ ವರ್ಗದ ಬೆವರು ಅಗತ್ಯ. ಆದರೆ ಕಳೆದ ಹತ್ತು ವರ್ಷಗಳಿಂದ ಶ್ರಮಜೀವಿಗಳ ಬೆವರನ್ನು ಕಸಿಯುವ ಪ್ರಭುತ್ವ ಅಸ್ತಿತ್ವದಲ್ಲಿದೆ. ಅದನ್ನು ಸೋಲಿಸುವುದು ಅನಿವಾರ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ರಂಜಾನ್ ದರ್ಗಾ ಹೇಳಿದರು
ಇಲ್ಲಿಯ ಜೆ.ಸಿ. ನಗರದ ಅಕ್ಕನಬಳಗದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಎಐಟಿಯುಸಿ ಹಾಗೂ ಟಿಯುಸಿಸಿ ಸಂಘಟನೆಗಳು ಜಂಟಿಯಾಗಿ ಬುಧವಾರ ಏರ್ಪಡಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರು ಕೇವಲ ವ್ಯಕ್ತಿಯಲ್ಲ ಅದೊಂದು ಶಕ್ತಿ, ನಾವು ಈ ಸಂದರ್ಭದಲ್ಲಿ ಮಲಗಿದರೆ ಮತ್ತೆ ಮೇಲೆಳಲು ಸಾದ್ಯವಿಲ್ಲ ಎಂದರು
ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಜನಸಾಮಾನ್ಯರು ಬಳಸುವ ಆಹಾರ ಧಾನ್ಯಗಳ ದರಗಳು ಶೇ. 71ರಷ್ಟು ಏರಿಯಾಗಿದೆ. ಕಾರ್ಮಿಕರ ವೇತನ ಮಾತ್ರ ಶೇ. 37 ರಷ್ಟು ಹೆಚ್ಚಳವಾಗಿದೆ. ಬಿಜೆಪಿ ನೇತೃತ್ವದ ಸರ್ಕಾರ ಜಾರಿ ಮಾಡುತ್ತಿರುವ ಶ್ರೀಮಂತ ಪರವಾದ ನೀತಿಗಳೇ ಕಾರ್ಮಿಕರ ದೈನಂದಿನ ಬದುಕನ್ನೇ ನಾಶಮಾಡುತ್ತಿವೆ ಎಂದು ದೂರಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ್, ಟಿಯುಸಿಸಿ ಜಿಲ್ಲಾ ಅಧ್ಯಕ್ಷ ಅಶೋಕ ಬಾರ್ಕಿ, ಎಐಟಿಯುಸಿ ಮುಖಂಡ ಆರ್.ಎಫ್. ಕವಳಿಕಾಯಿ, ಕಟ್ಟಡ ಕಾರ್ಮಿಕ ಸಂಘದ ಎ.ಎಸ್.ಪೀರಜಾದೆ, ನಮ್ಮ ಕರ್ನಾಟಕ ಸೇನೆಯ ಅಮೃತ ಇಜಾರಿ, ಅಂಗನವಾಡಿ ಮುಖಂಡರಾದ ಬತುಲ್ ಕಿಲ್ಲೆದಾರ, ಅಟೋ ಚಾಲಕರ ಸಂಘದ ಚಿದಾನಂದ ಸವದತ್ತಿ ಮಾತನಾಡಿದರು. ಹಿರಿಯ ರೈತ ಮುಖಂಡ ಬಿ.ಎಸ್. ಸೊಪ್ಪಿನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಸಂಘಟನೆಗಳ ಮುಖಂಡರಾದ ಬಸವಣ್ಣೆಪ್ಪ ನೀರಲಗಿ, ಜಿ.ಎಂ. ವೈದ್ಯ, ಚನ್ನಮ್ಮ ಡೊಳ್ಳಿನ, ಬಿ.ಎನ್.ಪೂಜಾರಿ, ಬಿ.ಐ.ಈಳಿಗೇರ, ಹನಮಂತಪ್ಪ ಪವಾಡಿ, ಉದಯ ಗದಗಕರ, ಬಿ.ಎಫ್. ಹರಕೋಣಿ, ವಿನೋಧ ಕುಮಾರ ವೀರಾಪೂರ ಮುಂತಾದವರು ಉಪಸ್ಥಿತರಿದ್ದರು. ಸಮುದಾಯ ಕಲಾತಂಡದವರು ‘ಜನ ಇನ್ನೂ ಸತ್ತಿಲ್ಲ’ ಎಂಬ ನಾಟಕವನ್ನು ಪ್ರಸ್ತುತ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net