

ನೆಲಮಂಗಲ: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ಗೆ ಮೇಕೆದಾಟು ಯೋಜನೆಯ ಬಗ್ಗೆ ಇದ್ದ ಕಾಳಜಿ ಚುನಾವಣೆ ಬಳಿಕ ಇಲ್ಲದಿರುವುದು ಬೇಸರದ ಸಂಗತಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ಜಿ.ಉಮೇಶ್‌ಗೌಡ ಅಸಮಾಧಾನ ಹೊರಹಾಕಿದರು.
ನಗರದ ಪ್ರವಾಸಿ ಮಂದಿರ ಬಳಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ಮೇಕೆದಾಟು ಯೋಜನೆಯ ವಿಧಾನಸೌಧ ಚಲೋ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕುಡಿಯುವ ನೀರಿನ ಸಮಸ್ಯೆಗೆ ದೀರ್ಘಾವಧಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ಅತ್ಯಂತ ಮುಖ್ಯವಾಗಿದೆ. ಈ ಯೋಜನೆ ಜಾರಿಗೆ ರಾಜ್ಯದ ಎಲ್ಲ ಪಕ್ಷಗಳ ನಾಯಕರು ಪಕ್ಷಭೇದ ಮರೆತು ಹೋರಾಟ ಮಾಡಬೇಕು. ವಿಧಾನಸಭಾ ಚುನಾವಣೆಗೂ ಮುನ್ನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯೋಜನೆ ಜಾರಿಗಾಗಿ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿದ್ದರು. ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ನಾಯಕರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ನಂತರ ಅವರದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಇದುವರೆಗೆ ಯೋಜನೆ ಜಾರಿ ಮರೆತಿರುವುದು ನೋವಿನ ಸಂಗತಿ. ರಾಜ್ಯ ಸರ್ಕಾರ ರೈತರು ಹಾಗೂ ಸಾರ್ವಜನಿಕರ ಬಗ್ಗೆ ಕಾಳಜಿ ವಹಿಸಿ ಮೇಕೆದಾಟು ಯೋಜನೆ ಜಾರಿ ಬಗ್ಗೆ ಕ್ರಮ ವಹಿಸಬೇಕು ಎಂದರು.
ಕರವೇ ಗೌರವಾಧ್ಯಕ್ಷ ಕುಮಾರ್, ನಗರ ಅಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ಶಶಿಧರ್, ಸೊಲೂರು ಹೋಬಳಿ ಅಧ್ಯಕ್ಷ ಗವಿರಂಗಯ್ಯ, ಸೊಂಪುರ ಅಧ್ಯಕ್ಷ ವಿನೋದ್, ಕಾರ್ಮಿಕ ಘಟಕದ ಅಧ್ಯಕ್ಷ ವೇಣು, ಮಹಿಳಾ ಘಟಕ ಅಧ್ಯಕ್ಷೆ ಶೈಲಜಾ, ಮುಖಂಡ ಚೇತನ್, ಸೌಮ್ಯ, ಕಿರಣ್ ಇತರರು ಇದ್ದರು.
250ಕ್ಕೂ ಹೆಚ್ಚು ಮಂದಿ ಪಾದಯಾತ್ರೆ
ಮೇಕೆದಾಟು ಯೋಜನೆ ಜಾರಿಗಾಗಿ ರಾಮನಗರದಿಂದ ವಿಧಾನಸೌಧದವರೆಗೂ ನಡೆಯುತ್ತಿರುವ ಹೋರಾಟದಲ್ಲಿ ಸಂಘಟನೆಯ ಸಾವಿರಾರು ಮಂದಿ ಭಾಗಿಯಾಗುತ್ತ್ತಿದ್ದಾರೆ. ತಾಲೂಕಿನಿಂದ ಟಿಟಿ ವಾಹನ ಹಾಗೂ ಕಾರುಗಳಿಂದ 250ಕ್ಕೂ ಹೆಚ್ಚು ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದೇವೆ ಎಂದು ಕರವೇ ತಾಲೂಕು ಅಧ್ಯಕ್ಷ ರಾಘವೇಂದ್ರ ತಿಳಿಸಿದರು.