

ಬೆಂಗಳೂರು: ಖಾಲಿ ಇರುವ ಹುದ್ದೆಗಳ ಭರ್ತಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಬೇಕು ಎಂದು ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಆಗ್ರಹಿಸಿದರು.
ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಒ) ಕರ್ನಾಟಕ ರಾಜ್ಯ ಸಮಿತಿಯ ನೇತೃತ್ವದಲ್ಲಿ ಗುರುವಾರ ಫ್ರೀಡಂ ಪಾರ್ಕ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಹಾಗೂ ನೇಮಕಾತಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ೨ ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಆದರೆ ನೇಮಕಾತಿ ಮಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ನೇಮಕಾತಿ ಮಾಡಿದರೆ ನಮಗೇನು ಸಿಗುತ್ತದೆ ಎಂಬ ಧೋರಣೆ ಅಧಿಕಾರದಲ್ಲಿ ಇರುವವರಲ್ಲಿ ಇರುವುದು ಖಂಡನೀಯ. ರಾಜಕೀಯ ಎನ್ನುವುದು ಸಮಾಜ ಸೇವೆಗೆ ಬದಲಾಗಿ ಹಣ ಮಾಡುವ ದಂಧೆಯಾಗಿದೆ. ಅದಕ್ಕಾಗಿಯೇ ನ್ಯಾಯಾಧೀಶರು, ಐಪಿಎಸ್, ಐಎಎಸ್ ಅಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ರಾಜಕೀಯ ಸೇರುತ್ತಿದ್ದಾರೆ ಎಂದರು.
ದುರಾಸೆ ರಾಜಕಾರಣಿಗಳನ್ನು ಯಾವ ಹಂತಕ್ಕಾದರೂ ದೂಡುತ್ತದೆ. ನಿರಂತರವಾಗಿ ನಿರ್ಗತಿಕತನಕ್ಕೆ ದೂಡಲಾದ ಜನರು ಸುಮ್ಮನೆ ಕೂರುವುದಿಲ್ಲ, ಅವರು ಪ್ರಶ್ನೆ ಮಾಡುವುದನ್ನು ಕಲಿಯುತ್ತಾರೆ. ನಿರುದ್ಯೋಗ ಹೆಚ್ಚಾದಂತೆ ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಹೆಚ್ಚುತ್ತವೆ. ನ್ಯಾಯಾಂಗದ ಮೂಲಕ ನ್ಯಾಯ ಸಿಗಲು ಸಾಧ್ಯವಿಲ್ಲ. ಹಾಗಾಗಿ ಯುವಜನರು ಈ ರೀತಿಯ ಸಮಸ್ಯೆಗಳ ವಿರುದ್ಧ ಹೋರಾಡಬೇಕು ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲದ ನಿವೃತ್ತ ಪ್ರಾಧ್ಯಾಪಕ ಡಾ. ಟಿ. ಆರ್. ಚಂದ್ರಶೇಖರ್ ಮಾತನಾಡಿ, ನಮ್ಮ ದೇಶದಲ್ಲಿ ಅಪೌಷ್ಠಿಕತೆ, ನಿರುದ್ಯೋಗ, ಬಡತನ ಹೆಚ್ಚುತ್ತಲೇ ಇವೆ. ಹಸಿವೆಯ ಸೂಚ್ಯಂಕದಲ್ಲಿ ನಮ್ಮ ದೇಶ ೧೨೫ ದೇಶಗಳಲ್ಲಿ ೧೧೧ನೇ ಸ್ಥಾನದಲ್ಲಿದೆ. ಆಳುವ ಸರ್ಕಾರಗಳ ಆರ್ಥಿಕ ನೀತಿಗಳು ಕಾರ್ಪೋರೇಟ್ ಪರ, ಖಾಸಗಿಕರಣದ ಪರವಾಗಿವೆ. ಖಾಸಗಿಯವರ ಉದ್ದೇಶ ಗರಿಷ್ಠ ಲಾಭವಾಗಿದೆ. ಆದ್ದರಿಂದ ಕಾರ್ಮಿಕರ ಸಂಖ್ಯೆ ಕಡಿಮೆ ಮಾಡಿ ಯಾಂತ್ರಿಕರಣದ ಮೊರೆ ಹೋಗುತ್ತಾರೆ. ಆದ್ದರಿಂದ ಸರ್ಕಾರದ ನೀತಿಗಳು ಉದ್ಯೋಗದ ಪರವಾಗಿ ರೂಪಗೊಳ್ಳಬೇಕು ಎಂದು ಆಗ್ರಹಿಸಿದರು.
ಎಐಡಿವೈಓನ ಅಖಿಲ ಭಾರತ ಉಪಾಧ್ಯಕ್ಷ ಡಾ.ಜಿ.ಎಸ್.ಕುಮಾರ್ ಮಾತನಾಡಿ, ಜನಗಳ ಸೇವೆ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಸರ್ಕಾರಗಳು ಲಕ್ಷ ಲಕ್ಷ ಹುದ್ದೆಗಳನ್ನು ಖಾಲಿ ಇಟ್ಟುಕೊಂಡು ಹೇಗೆ ಜನಗಳ ಸೇವೆ ಮಾಡಲು ಸಾಧ್ಯ. ಯುವಕರು ನಾವು ದುಡಿಯುತ್ತೇವೆ ನಮಗೆ ಕೆಲಸ ಕೊಡಿ ಎಂದರೂ ಸರ್ಕಾರ ಕೆಲಸ ಕೊಡುತ್ತಿಲ್ಲ. ಇವತ್ತು ಸರ್ಕಾರಗಳ ಆಧ್ಯತೆ ಬೇರೆಯೆ ಇದೆ. ಚುನಾವಣೆಗಳಲ್ಲಿ ಕಾರ್ಮಿಕರ-ರೈತರ ಮತ ಪಡೆದು ಅಧಿಕಾರಕ್ಕೆ ಬಂದು ಬಂಡವಾಳಷಾಹಿ ಪರವಾಗಿ ನೀತಿಗಳನ್ನು ರೂಪಿಸುತ್ತಿವೆ. ಆ ಕಾರಣ ಯುವಕರಿಗೆ ಕೆಲಸ ನೀಡುತ್ತಿಲ್ಲ. ಈ ಸರ್ಕಾರಗಳ ಯುವಜನ ವಿರೋಧಿ ನೀತಿಗಳ ವಿರುದ್ಧ ಹೊರಾಡುತ್ತಲೇ, ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕಿ ಸಮ ಸಮಾಜ ನಿರ್ಮಾಣದ ಕ್ರಾಂತಿಕಾರಿ ಹೋರಾಟವನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಪ್ರಗತಿಪರ ಚಿಂತಕ ಡಾ. ನಾ.ದಿವಾಕರ್, ಎಐಡಿವೈಓನ ಅಖಿಲ ಭಾರತ ಉಪಾಧ್ಯಕ್ಷ ರಾಜಗೋಪಾಲ್, ಎಐಡಿವೈಓ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.