ಸರ್ಕಾರ ಮಕ್ಕಳ ರಂಗಶಾಲೆ ಆರಂಭಿಸಲಿ: ಕಲಾವಿದ ಬಾದಲ್ ನಂಜುಂಡಸ್ವಾಮಿ

18
Published on

ಮೈಸೂರು: ಹಿರಿಯ ಕಲಾವಿದರ ಅನುಭವ ಬಳಸಿಕೊಂಡು ಸರ್ಕಾರ ಮಕ್ಕಳ ರಂಗಶಾಲೆ ಆರಂಭಿಸಬೇಕು ಎಂದು ಕಲಾವಿದ ಬಾದಲ್ ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.

ರಂಗಾಯಣದಿಂದ ಭೂಮಿಗೀತದಲ್ಲಿ ಐದು ದಿನಗಳ ಕಾಲ ಆಯೋಜಿಸಿರುವ ರಂಗಭೀಷ್ಮ ಬಿ.ವಿ.ಕಾರಂತ ಕಾಲೇಜು ರಂಗೋತ್ಸವಕ್ಕೆ ಸೋಮವಾರ ‘ಆಲದ ಮರ’ದ ಚಿತ್ರ ಬರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ರಂಗಾಯಣ ಸೇರಿದಂತೆ ಅನೇಕ ಹಿರಿಯ ಕಲಾವಿದರು ನಮ್ಮ ನಾಡಿನಲ್ಲಿ ಇದ್ದಾರೆ. ಅವರ ಅನುಭವವನ್ನು ಬಳಸಿಕೊಳ್ಳಬೇಕು. ಆ ಮೂಲಕ ಮಕ್ಕಳಲ್ಲಿ ರಂಗಾಸಕ್ತಿ ಬೆಳೆಸಲು ಮಕ್ಕಳ ರಂಗಶಾಲೆ ಆರಂಭಿಸಬೇಕು. ರಂಗಾಯಣದ ಒಬ್ಬೊಬ್ಬ ಕಲಾವಿದರು ವಿಶ್ವಕೋಶದಂತೆ. ಇವರಲ್ಲಿ ಹಲವರು ನಿವೃತ್ತರಾಗಿದ್ದಾರೆ. ಕೆಲವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಆದ್ದರಿಂದ ಅವರ ಅನುಭವ ಮತ್ತು ಹಿರಿತನವನ್ನು ಬಳಸಿಕೊಳ್ಳುವುದಕೋಸ್ಕರವಾದರೂ ಮಕ್ಕಳ ರಂಗಶಾಲೆಯನ್ನು ಆರಂಭಿಸಿ ‘ಅಜ್ಜಿಕಥೆ’ ಹೇಳುವ ಕಲಾವಿದರಾಗಿಯಾದರೂ ನೇಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾಡಿನ ರಂಗಭೂಮಿಯ ಬೆಳವಣಿಗೆಯಲ್ಲಿ ರಂಗಾಯಣದ ಕಲಾವಿದರ ಕೊಡುಗೆ ಅಪಾರವಾಗಿದ್ದು, ಸಂಸ್ಥೆಯು ಗಟ್ಟಿಯಾಗಿ ನೆಲೆಯೂರಲು ತಾಯಿ ಬೇರಿನಂತೆ ಕೆಲಸ ಮಾಡಿದ್ದಾರೆ. ಹಾಗಾಗಿ ಆಳುವ ಸರ್ಕಾರ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು. ರಂಗ ಸಮಾಜದ ಸದಸ್ಯತ್ವವನ್ನಾದರೂ ಸರ್ಕಾರವು ನೀಡಬೇಕು ಎಂದರು.

ರಂಗಾಯಣದ ನಿರ್ದೇಶಕರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸರ್ಕಾರ ಈಗ ಅನುಸರಿಸುತ್ತಿರುವ ಮಾರ್ಗ ಸರಿಯಾಗಿ ಇಲ್ಲ. ಬಸ್ಸಿನಲ್ಲಿ ಸೀಟು ಹಿಡಿಯಲು ಕರ್ಚಿಫ್ ಹಾಕುವ ರೀತಿಯಲ್ಲಿ ನಿರ್ದೇಶಕರ ಹುದ್ದೆಯ ಆಯ್ಕೆಯಾಗುವುದು ಕಲಾವಿದರಿಗೆ ಮಾಡುತ್ತಿರುವ ಅವಮಾನವಾಗಿದೆ. ಆದ್ದರಿಂದ ಸರ್ಕಾರ ಸ್ವತಃ ತಾವೇ ಹುದ್ದೆಗೆ ಸಮರ್ಥವಾಗಿರುವವರನ್ನು ಗುರುತಿಸುವ ಕೆಲಸ ಮಾಡಬೇಕು ಎಂದರು.

ಕಿರುತೆರೆ ಕಲಾವಿದೆ ಸುಷ್ಮಾ ನಾಣಯ್ಯ ಮಾತನಾಡಿ, ರಂಗಭೂಮಿಯಲ್ಲಿ ವೃತ್ತಿಪರ ಕಲಾವಿದರಾಗಬೇಕು ಎನ್ನುವವರೂ ಇದರೊಂದಿಗೆ ಪರ್ಯಾಯವಾದ ಉದ್ಯೋಗವನ್ನು ಹೊಂದಿದ್ದರೆ ಜೀವನ ಸಾಗಿಸಲು ಅನುಕೂಲವಾಗುತ್ತದೆ ಎಂದರು.

ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಲ್ಲಿ ಕಲಿಕೆಯ ಜತೆಗೆ ಸಾಮಾಜಿಕ ಪ್ರಜ್ಞೆ ಮೂಡಲು ಈ ರಂಗೋತ್ಸವ ಸಹಕಾರಿಯಾಗಿದೆ. ಇಲ್ಲಿ ನಾಟಕ ಮಾಡುವವರು ಕಾಲೇಜುಗಳಲ್ಲಿ ರಂಗಾಸಕ್ತಿ ಹಾಗೂ ಸಂವಾದದ ವಾತಾವರಣವನ್ನು ಮೂಡಿಸುತ್ತಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ. ಎಂ.ಡಿ.ಸುದರ್ಶನ್, ರಂಗ ಸಮಾಜದ ಸದಸ್ಯ ಎಚ್.ಎಸ್.ಸುರೇಶ್ ಬಾಬು, ರಂಗೋತ್ಸವದ ಸಂಚಾಲಕಿ ಕೆ.ಆರ್.ನಂದಿನಿ, ಅರಸೀಕೆರೆ ಯೋಗಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net