ದಾನವಾಗಿ ಕೊಟ್ಟಿರುವ ಸಜ್ಜೆಪಾಳ್ಯ ಜಮೀನು ಭೂಗಳ್ಳರ ಪಾಲಾಗದಂತೆ ಸರ್ಕಾರ ತಡೆಯಲಿ

rangamma
Published on

ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಸಜ್ಜೆಪಾಳ್ಯ ಗ್ರಾಮದಲ್ಲಿ ರಾಜ್ಯ ಒಕ್ಕಲಿಗರ ಸಂಕ್ಕೆ ದಾನವಾಗಿ ಕೊಟ್ಟಿರುವ ಜಮೀನು ಭೂಗಳ್ಳರ ಪಾಲಾಗದಂತೆ ತಡೆಯಬೇಕೆಂದು ಕೃಷ್ಣಪ್ಪ ರಂಗಮ್ಮ ಶಿಕ್ಷಣ ಟ್ರಸ್ಟ್​, ಸರ್ಕಾರಕ್ಕೆ ಮನವಿ ಮಾಡಿದೆ.

ವಿದ್ಯಾರ್ಥಿಗಳ ವಸತಿ ಸೌಕರ್ಯಕ್ಕಾಗಿ ಹಾಸ್ಟೆಲ್​ ನಿರ್ಮಿಸಲು "ಕೃಷ್ಣಪ್ಪ ರಂಗಮ್ಮ' ಎಂಬುವರು 1978ರಲ್ಲಿ 96 ಎಕರೆಯನ್ನು ಸಂಕ್ಕೆ ದಾನ ನೀಡಿದ್ದರು. ಈ ಜಾಗವನ್ನು ಕೆಲವು ಪ್ರಭಾವಿಗಳು ಹಂತ ಹಂತವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಸಂಕ್ಕೆ ಸೇರಿದ್ದ ಜಾಗದಲ್ಲಿ ಲೇಔಟ್​ ನಿರ್ಮಿಸಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ಕೇಸ್​ ನಡೆಯುತ್ತಿದೆ. ಜಮೀನು ಉಳಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್​, ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್​.ಅಶೋಕ್​ ಮತ್ತು ಕಂದಾಯ ಸಚಿವ ಕೃಷ್ಣಭೈರೇಗೌಡ ಸೇರಿ ಸಂದ ಮಂತ್ರಿಗಳಿಗೆ ಹಾಗೂ ಜನಾಂಗದ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಟ್ರಸ್ಟ್​ನ ಟ್ರಸ್ಟಿ ಎಚ್​.ಎನ್​.ಅಶೋಕ್​ ಸುದ್ದಿಗೋಷ್ಠಿಯಲ್ಲಿ ಶನಿವಾರ ಬೇಸರ ವ್ಯಕ್ತಪಡಿಸಿದರು.

ಮತ್ತೊಬ್ಬ ಟ್ರಸ್ಟಿ ಟಿ.ಕೋನಪ್ಪ ರೆಡ್ಡಿ ಮಾತನಾಡಿ, 44 ಎಕರೆ 33 ಗುಂಟೆ ಜಮೀನಿಗೆ ಖಾತೆ ಬದಲಾವಣೆ ಮಾಡಿರುವ ಕ್ರಮವು ನಿಯಮೋಚಿತವಲ್ಲ. ರಂಗಮ್ಮರವರ ಹೆಸರು ರದ್ದುಪಡಿಸಿ ಬಿ.ಎಂ.ಪುಟ್ಟಸ್ವಾಮಿ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಮಾಡುವ ಕ್ರಮದಲ್ಲಿ ಶಾಮೀಲಾಗಿರುವ ನೌಕರರ ವಿರುದ್ಧ ಕ್ರಮಕೈಗೊಳ್ಳುವುದು ಸೂಕ್ತ ಎಂದು ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತರು ವರದಿ ನೀಡಿದ್ದಾರೆ.ಈ ವರದಿ ಪರವಾಗಿ ನಿಲ್ಲುವುದಾಗಿ ಆರಂಭದಲ್ಲಿ ಡಿಕೆಶಿ, ಕೃಷ್ಣಭೈರೇಗೌಡ ಹೇಳಿದ್ದರು. ಆದರೆ, ಇದೀಗ ಅವರೆಲ್ಲರೂ ಮೌನವಹಿಸಿದ್ದಾರೆ. ನಮ್ಮ ಜನಾಂಗದ ರಾಜಕೀಯ ನಾಯಕರು ಈಗಲಾದರೂ ಎಚ್ಚೆತ್ತುಕೊಂಡು ಜಮೀನು ಉಳಿಸಲು ಮುಂದಾಗಬೇಕು ಎಂದು ಕೋರಿದರು. ಟ್ರಸ್ಟಿಗಳಾದ ಸಿ.ಎಂ.ಮಾರೇಗೌಡ, ಸಿ.ಜಿ.ಗಂಗಾಧರ್​, ಕೆ.ಎಸ್​.ಸುರೇಶ್​ ಮತ್ತಿತರರಿದ್ದರು.

ಉಗ್ರ ಪ್ರತಿಭಟನೆ: ಅಪ್ಪಚ್ಚು ರಂಜನ್​ ನೇತೃತ್ವದ 13ನೇ ವಿಧಾನಸಭಾ ಅರ್ಜಿ ಸಮಿತಿ, ನ್ಯಾಯಪೀಠಗಳು ಟ್ರಸ್ಟ್​ನ ಉದ್ದೇಶಗಳಿಗೆ ಸೇರಬೇಕೆಂದು ಸ್ಪಷ್ಟವಾಗಿ ಹೇಳಿವೆ. ಆದರೂ ಕೆಲ ಪ್ರಭಾವಿಗಳು ಪ್ರಭಾವ ಬಳಸಿ ಒತ್ತುವರಿ ಮಾಡಿಕೊಂಡಿದ್ದಾರೆ.1,500 ಕೋಟಿ ರೂ.ಮೌಲ್ಯದ 44 ಎಕರೆ ಜಮೀನು ಉಳಿಸಲು ನಮ್ಮ ಟ್ರಸ್ಟ್​ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದೆ. ಇದೀಗ ಮತ್ತೊಮ್ಮೆ ಪ್ರತಿಭಟನೆ ನಡೆಸಲಾಗುವುದು ಎಂದು ಎಂದು ಮತ್ತೊಬ್ಬ ಟ್ರಸ್ಟಿ ಡಾ.ಕೆ.ವಿ.ರೇಣುಕಾ ಪ್ರಸಾದ್​ ಹೇಳಿದರು.

ಶೈಕ್ಷಣಿಕ ಉದ್ದೇಶಕ್ಕೆ ದಾನ ಕೊಟ್ಟಿರುವ ಜಮೀನು ಉಳಿಸುವಂತೆ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹಾಕಲಾಗುವುದು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಗಮನಕ್ಕೆ ಮತ್ತೊಮ್ಮೆ ತರುತ್ತೇವೆ. ಆದಿಚುಂಚುನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾರ್ಗದರ್ಶನ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ.

ಬಿ.ಕೆಂಚಪ್ಪಗೌಡ, ಕೃಷ್ಣಪ್ಪ ರಂಗಮ್ಮ ಶಿಕ್ಷಣ ಟ್ರಸ್ಟ್​ನ ಟ್ರಸ್ಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net