

ರಾಯಚೂರು ಗ್ರಾಮೀಣ ಭಾಗದ ಗ್ರಾಮಗಳಲ್ಲಿ ಶಾಂತಿ ಕಾಪಾಡಲು ಕಾರ್ಯನಿರ್ವಹಿಸುತ್ತಿರುವ ದಳಪತಿಗಳಿಗೆ ಸರ್ಕಾರ ಗೌರವಧನ ನೀಡುವಂತೆ ಹೈಕೋರ್ಟ್ ಆದೇಶ ಮಾಡಿದ್ದರೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಕೂಡಲೇ ದಳಪತಿಗಳಿಗೆ ಗೌರವಧನ ನೀಡಲು ನಿರ್ಧಾರ ಕೈಗೊಳ್ಳಬೇಕೆಂದು ಅಖಿಲ ಕರ್ನಾಟಕ ದಳಪತಿಗಳ ಸಂಘದ ರಾಜ್ಯಾಧ್ಯಕ್ಷ ಶರಣಬಸನಗೌಡ ಹೊರಪೇಟೆ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1976 ರಲ್ಲಿ ಡಿ.ದೇವರಾಜ ಅರಸು ದಳಪತಿಗಳನ್ನು ನೇಮಿಸಲು ಆದೇಶಿಸಿದ್ದರು. ಅಲ್ಲಿಂದ ಕಾರ್ಯನಿರ್ವಹಿಸುತ್ತಾ ಬಂದಿರುವ ದಳಪತಿಗಳಿಗೆ ಯಾವ ಸರ್ಕಾರವೂ ಗೌರವ ಧನ ನೀಡಲು ಮುಂದಾಗಿಲ್ಲ, ಮುಖ್ಯಮಂತ್ರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾರು ಸ್ಪಂದಿಸಿಲ್ಲ. 2002 ರಲ್ಲಿ ಸರ್ಕಾರ ನಿರ್ಲಕ್ಷ್ಯ ವಿರುದ್ದ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಹೈಕೋರ್ಟ್ ದಳಪತಿಗಳಿಗೆ ಗೌರವ ಧನ ನೀಡಬೇಕೆಂದು ಆದೇಶಿಸಿತು. ಆದರೆ ಆಯಾ ಜಿಲ್ಲಾಧಿಕಾರಿಗಳು ನೋಟಿಸ್ ಕಳುಹಿಸಿ ದಳಪತಿಗಳಿಗೆ ಗೌರವಧನ ನೀಡಲು ಬರುವದಿಲ್ಲ ಎಂದರು.
ನ್ಯಾಯಾಲಯ ಆದೇಶ ಜಾರಿಗೆ 2013 ರಲ್ಲಿ ಬೆಂಗಳೂರಿನ ಫ್ರೀಡ್‌ಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದಾಗ ಅಂದಿನ ಸರ್ಕಾರ ಸೂಕ್ತ ಕ್ರಮ ಭರವಸೆ ನೀಡಿತ್ತು. ಆದರೂ ಏನೂ ಆಗಿಲ್ಲ. ಅನೇಕ ದಳಪತಿಗಳು ಸಾವಿಗೀಡಾಗಿದ್ದಾರೆ. ಸರ್ಕಾರ ಈಗಾಲಾದರೂ ದಳಪತಿಗಳಿಗೆ ಗೌರವ ಧನ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಅಮರೇಗೌಡ ,ರಾಜಸಾಬ, ಬಸನಗೌಡ, ರಾಮಯ್ಯ, ಬಸವರಾಜ, ಶರಬಣ್ಣ ಬಾರಿಕಾಯಿ, ಶ್ರೀನಿವಾಸ, ಬಸವನಗೌಡ ಇದ್ದರು.