ಪೌರ ನೌಕರರನ್ನು ಸರ್ಕಾರ ನಿರ್ಲಕ್ಷಿಸದಿರಲಿ

30blrp1
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೇಲೂರು ಪುರಸಭೆಯ ಪೌರ ನೌಕರರ ಸಂಘದ ಪದಾಧಿಕಾರಿಗಳು, ಕಾರ್ಮಿಕರು ಮತು ಸಿಬ್ಬಂದಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟಿಸಿದರು.
Published on

ಬೇಲೂರು : ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪೌರ ಕಾರ್ಮಿಕರು ಹಾಗೂ ಪುರಸಭೆ ಸಿಬ್ಬಂದಿ ನಡೆಸುತ್ತಿರುವ ಹೋರಾಟ ಶುಕ್ರವಾರವೂ ಮುಂದುವರಿಯಿತು.

ಮೂರನೇ ದಿನದಂದು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಒತ್ತಾಯಿಸಿದರು.

ಪೌರ ನೌಕರರ ಸಂಘದ ಅಧ್ಯಕ್ಷ ಗೋಪಾಲ್ ಮಾತನಾಡಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು, ಪೌರ ನೌಕರರನ್ನು ಸರ್ಕಾರ ನಿರ್ಲಕ್ಷಿಸಬಾರದು. ಹೊರ ಗುತ್ತಿಗೆ ಪದ್ಧತಿ ನಿಲ್ಲಿಸಿ ಪೌರ ಕಾರ್ಮಿಕರನ್ನು ಕಾಯಂ ಗೊಳಿಸಬೇಕು. ನೀರು ಸರಬರಾಜುದಾರರು ಹಾಗೂ ವಾಹನ ಚಾಲಕರ ಜೀವನಕ್ಕೆ ಭದ್ರತೆ ಇಲ್ಲದೆ ಸಾಕಷ್ಟು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದು, ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಜತೆಗೆ ಪೌರ ಕಾರ್ಮಿಕರು ಮತ್ತು ನೀರು ಸರಬರಾಜುದಾರರಿಗೆ ಪ್ರತಿ ತಿಂಗಳು ವೇತನ ಸಿಗುತ್ತಿಲ್ಲ. ಇದರಿಂದ ಕುಟುಂಬದ ನಿರ್ವಹಣೆ ಕಷ್ಟವಾಗಿದ್ದು, ಈ ಬಗ್ಗೆ ಸರ್ಕಾರ ಗಮನ ಹರಿಸಿ ಸಹಕಾರ ನೀಡಬೇಕೆಂದು ಒತ್ತಾಯಿಸಿದ ಅವರು, ರಾಜ್ಯ ಸರ್ಕಾರ ತಕ್ಷಣವೇ ನಮ್ಮ ಮನವಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮುಂದುವರಿಯುತ್ತದೆ. ನಮ್ಮ ಮುಷ್ಕರದಿಂದ ಪಟ್ಟಣದ ಸ್ವಚ್ಛತೆ ಹಾಗೂ ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ನಮ್ಮ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ನಿರ್ವಹಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.

ಪೌರ ನೌಕರರ ಸಂಘದ ಕಾರ್ಯದರ್ಶಿ ಬಿ.ಆರ್.ಕುಮಾರ್ ಮಾತನಾಡಿ, ರಾಜ್ಯ ಸಂಘದ ಆದೇಶ ಮತ್ತು ನಿರ್ದೇಶನದಂತೆ ಈಗಾಗಲೇ ಮೂರನೇ ದಿನದಲ್ಲಿ ನಮ್ಮ ಮುಷ್ಕರ ಮುಂದುವರಿಯುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪೌರ ನೌಕರರ ಸಂಘದ ಖಜಾಂಚಿ ಪೃಥ್ವಿ, ಜಿಲ್ಲಾ ಸಂಘದ ನಿರ್ದೇಶಕಿಯರಾದ ಜ್ಯೋತಿ, ಪ್ರತಿಕ್ಷ, ತಾಲೂಕು ನಿರ್ದೇಶಕರಾದ ನೀಲಾ, ಓಬಳೇಶ್, ಸಂತೋಷ್, ಸಂಜು, ಮಂಜುಳಾ, ಭಾಗ್ಯಮ್ಮ, ಸಲ್ಮಾನ್ ಖಾನ್, ಮೋಹನ್, ವಿಶ್ವನಾಥ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net