ಸರ್ಕಾರ ಆ.31ರೊಳಗೆ ರೈತರೊಂದಿಗೆ ಸಭೆ ಮಾಡಲಿ

CHAMARASA MALI PATIL
CHAMARASA MALI PATIL
Published on

ರಾಯಚೂರು ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ಗಳ ಅಳವಡಿಕೆ ವಿಳಂಬ, ಹೂಳು ನಿರ್ವಹಣೆಯಾಗದೇ ಇರುವುದು ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಆ.31ರೊಳಗೆ ಸರ್ಕಾರ ರೈತರೊಂದಿಗೆ ಸಭೆ ಮಾಡದಿದ್ದರೆ, ಸೆ.8 ರಂದು ತುಂಗಭದ್ರಾ ಜಲಾಶಯದ ಎದುರು ನಾಲ್ಕು ಜಿಲ್ಲೆಗಳ ರೈತರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳಚಿ ಒಂದು ವರ್ಷ ಕಳೆದಿದ್ದು, ಅದನ್ನು ತಾತ್ಕಾಲಿಕ ದುರಸ್ಥಿ ಮಾಡುವ ಸಂದರ್ಭದಲ್ಲಿ ತಜ್ಞರು ವರದಿ ನೀಡಿದ್ದು, ಗೇಟ್‌ಗಳನ್ನು ಅಳವಡಿಸಿ 70 ವರ್ಷಗಳು ಗತಿಸಿದ್ದು, ಹೊಸ ಗೇಟ್‌ಗಳನ್ನು ಅಳವಡಿಸಬೇಕು ಎಂಬ ಅಂಶವನ್ನು ಹೇಳಿದ್ದಾರೆ. ಅದರಂತೆ ರಾಜ್ಯ ಸರ್ಕಾರ ಟೆಂಡರ್ ಕರೆದು ಗುಜರಾತಿನ ಕಂಪನಿ ಗೇಟ್ ಅಳವಡಿಕೆ ಗುತ್ತಿಗೆ ಮುಂದಾಗಿದೆ ಆದರೆ ಗೇಟ್ ಅಳವಡಿಕೆಗೆ ಸರ್ಕಾರದಿಂದ ವಿಳಂಬ ಧೋರಣೆ ತೋರಲಾಗುತ್ತಿದೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತದೆ ಆದರಿಂದ ಸರ್ಕಾರ ಕೂಡಲೇ ರೈತರೊಂದಿಗೆ ಸಭೆ ಕರೆಯಬೇಕು ಎಂದರು.

ಜುಲೈ ಮತ್ತು ಆಗಸ್ಟ್ ನಡುವೆ ಹೆಚ್ಚಿನ ಮಳೆಯಾಗಿದ್ದು, ಹಳ್ಳದ ದಂಡೆಗಳು, ಹೊಳೆಯ ದಂಡೆಯಲ್ಲಿ ಹಾನಿ ಉಂಟಾಗಿದೆ. ಅತಿವೃಷ್ಠಿಯಿಂದ ಬೆಳೆಹಾನಿಯಾಗಿದೆ. ಅತಿವೃಷ್ಠಿಯಿಂದಾದ ಬೆಳೆಹಾನಿ ಸಮೀಕ್ಷೆ ನಡೆಸಿ, ಪ್ರಕೃತಿ ವಿಕೋಪ ನಿಧಿಯಡಿ ಪರಿಹಾರ ನೀಡಬೇಕು. ಕೇಂದ್ರದ ಒತ್ತಡದ ಮೇರೆಗೆ ಅನಧೀಕೃತ ಪಂಪ್‌ಸೆಟ್ಗಳೆಂದು ರೈತರ ಪಂಪ್ ಸೆಟ್ಗಳನ್ನು ತೆರವುಗೊಳಿಸಲಾಗುತ್ತಿದ್ದು, ಕೂಡಲೇ ರೈತರ ಪಂಪ್‌ಸೆಟ್ಗಳನ್ನು ಅಕ್ರಮವೆಂದು ಪರಿಗಣಿಸದೇ ಸಕ್ರಮಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್, ಬೂದಯ್ಯ ಸ್ವಾಮಿ, ಲಿಂಗಾರೆಡ್ಡಿ, ದೇವರಾಜ ನಾಯಕ, ಶಂಕ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net