

ರಾಯಚೂರು ದೇವರಾಜ ಅರಸು ಇವರ ಆಡಳಿತದಲ್ಲಿಯೇ ಉಳುವವನೇ ಭೂ ಒಡೆಯ ಎಂದು ಘೋಷಿಸಲಾಗಿತ್ತು. ಆದರೆ ಇದುವರೆಗೆ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ನೀಡಿಲ್ಲವೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಮಾರೆಪ್ಪ ಹರವಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕಾಂಗ್ರೆಸ್ ಸರ್ಕಾರ ಭೂಮಿಯನ್ನು ಸರ್ಕಾರ ಎಂದು ನಮೂದಿಸಿ ಭೂ ಮಾಲೀಕ ತ್ವಪಡೆದು ಜನರಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ ಯಾವದನ್ನು ಕೇಳದೆ ಭೂಮಿ ಮಂಜೂರು ಮಾಡುತ್ತಿದೆ. ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಒತ್ತುವರಿ ರಕ್ಷಿಸಿರುವ ಭೂ ಹೀನರಿಗೆ ಸಾಗುವಳಿ ಚೀಟಿ ನೀಡಲು ಸರ್ಕಾರ ಮುಂದಾಗದೇ ಇರುವದು ಖಂಡನೀಯವಾಗಿದೆ. ಅಂದು ಭೂ ಮಾಲೀಕರು ಶೋಷಣೆ ಮಾಡಿದರೆ,
ಇಂದು ಸರ್ಕಾರವೇ ಭೂ ಮಾಲೀಕನಾಗಿ ಭೂ ಹೀನರಿಗೆ ನೀಡಲು ಮುಂದಾಗುತ್ತಿಲ್ಲ. ದಲಿತರು, ಅಲೆಮಾರಿಗಳು, ಹಿಂದುಳಿದ ವರ್ಗಗಳ ಜನರು ಅನುಭವಿಸುತ್ತಿರುವ ಸಮಸ್ಯೆ ಒಂದು ಬಾರಿ ಅವಕಾಶ ನೀಡಿ ಭೂಮಿ ಹಂಚಿಕೆ ಮಾಡಬೇಕು. ಫಾರಂ, 50,53,57 ಅರ್ಜಿದಾರರಿಗೆ ಕಾರಣ ನೀಡಿ ಭೂಮಿ ಮಂಜೂರಾತಿ ನೀಡುತ್ತಿಲ್ಲ. ಆದರೆ ಕೈಗಾರಿಕೆಗಳಿಗೆ ಭೂಮಿಯನ್ನು ಸರ್ಕಾರ ನೀಡುತ್ತಿದೆ. ರಾಜ್ಯ ಸರ್ಕಾರ ದೇವರಾಜ ಅರಸು ಆಶಯಗಳಂತೆ ಕೂಡಲೇ ಭೂಹೀನರಿಗೆ ಭೂಮಿ ಹಂಚಿಕೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ವೀರೇಶ ಗಣದಿನ್ನಿ, ಮಾರೆಮ್ಮ, ನಾರಾಯಣಸ್ವಾಮಿ, ಆಂಜಿನೇಯ್ಯ , ಶಿವರಾಜ,ಈರಪ್ಪ ಇದ್ದರು.