

ಹಿರೀಸಾವೆ: ಸರ್ಕಾರವು ಶಿಕ್ಷಣದಲ್ಲಿ ದೈಹಿಕ ಶಿಕ್ಷಣಕ್ಕೆ ಒತ್ತು ನೀಡಿ, ಹೆಚ್ಚಿನ ಅನುದಾನ ಕೊಡುವ ಮೂಲಕ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಇಲ್ಲಿನ ಎನ್.ಗಂಗಾಧರ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಜತೆಯಲ್ಲಿ ದೈಹಿಕ ಶಿಕ್ಷಣಕ್ಕೆ ದಿನದಲ್ಲಿ ಒಂದು ಗಂಟೆಯನ್ನು ಶಿಕ್ಷಕರು ಮೀಸಲಿಡುವ ಮೂಲಕ ಕ್ರೀಡೆಗಳ ತರಬೇತಿ ನೀಡಬೇಕು. ತಾಲೂಕು ಮಟ್ಟದಿಂದ ಜಿಲ್ಲಾ, ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ಸೇರಿದಂತೆ ಎಲ್ಲರೀತಿಯಲ್ಲಿ ಸಹಕಾರ ನೀಡುವುದಾಗಿ ಶಾಸಕರು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್ ಮಾತನಾಡಿ, ಹಿರೀಸಾವೆ ಹೋಬಳಿಯಲ್ಲಿ ದೇವರಾಜು ಎಂಬ ಒಬ್ಬರೆ ದೈಹಿಕ ಶಿಕ್ಷಣ ಶಿಕ್ಷರು ಇದ್ದಾರೆ. ಸರ್ಕಾರವು ಈ ಬಗ್ಗೆ ಗಮನಹರಿಸಬೇಕು ಎಂದರು.
ಬಿಇಒ ದೀಪಾ ಮಾತನಾಡಿ, ಮೊಬೈಲ್ ಸೇರಿದಂತೆ ಆಧುನಿಕ ತಂತ್ರಜ್ಞಾನದ ಗೇಮ್‌ಗಳಿಂದ ಮಕ್ಕಳು ಆಟಾಟೋಪಗಳಲ್ಲಿ ಹೆಚ್ಚು ಭಾಗವಹಿಸುತ್ತಿಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಬೋರಯ್ಯ ಕ್ರೀಡಾ ಧ್ವಜಾರೋಹಣವನ್ನು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್ ಕ್ರೀಡಾ ಜ್ಯೋತಿ ನೆರವರಿಸಿದರು.
ಬಿಆರ್‌ಸಿ ಅನಿಲ್, ಇಸಿಒ ಎಸ್.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯ ಬೋರಣ್ಣ, ಮಾರುತಿ ಮಂಜು, ತಂಗಾಲಕ್ಷ್ಮೀ, ಭಾಗ್ಯಲಕ್ಷ್ಮೀ, ಪಿಡಿಒ ಕೆ.ಜೆ.ಸತೀಶ್, ಸೊಸೈಟಿ ಹರೀಶ್, ಎಚ್.ಕೆ.ವೆಂಕಟೇಶ್ ಇತರರಿದ್ದರು.