ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿ

4
ಹಿರೀಸಾವೆಯಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿಟಿ ರವಿ ಮಾತನಾಡಿದರು. ಸಿ.ಆರ್.ಚಿದಾನಂದ್, ಜಗದೀಶ್, ಪರಮ ಗಂಗಾಧರ್ ಇತರರಿದ್ದರು.
Published on

ಚನ್ನರಾಯಪಟ್ಟಣ: ಗಣೇಶೋತ್ಸವದಲ್ಲಿ ಲಾರಿ ಹರಿದು ಗಾಯಗೊಂಡವರ ಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಸರ್ಕಾರವನ್ನು ಆಗ್ರಹಿಸಿದರು.

ತಾಲೂಕಿನ ಹಿರೀಸಾವೆ ಗ್ರಾಮದ ಕಾಲೇಜು ರಸ್ತೆಯಲ್ಲಿರುವ ಭಗತ್ ಸಿಂಗ್ ಬಾಯ್ಸ ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳ ಹಿಂದೆ ಜಿಲ್ಲೆಯ ಮೊಸಳೆಹೊಸಹಳ್ಳಿಯಲ್ಲಿ ನಡೆದ ಗಣೇಶೋತ್ಸವದಲ್ಲಿ ಘನಘೋರ ಘಟನೆ ನಡೆದಿದ್ದು, ಘಟನೆಯಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಮಾನವೀಯತೆ ಪ್ರದರ್ಶಿಸಬೇಕು ಎಂದರು.

ಹಿಂದುತ್ವದ ಭಾವ ಬೆಳೆಸದಿದ್ದರೆ ದೇಶ ಉಳಿಯುವುದಿಲ್ಲ. ಪರಕೀಯ ಆಕ್ರಮಣಕಾರರ ಮನಸ್ಥಿತಿ ಇನ್ನೂ ಇದ್ದು, ಬೇರೆ ಬೇರೆ ರೀತಿಯಲ್ಲಿ ಆಕ್ರಮಣಕಾರರಿದ್ದಾರೆ. ನಮ್ಮ ದೇಶಕ್ಕೆ ಸಾಂಸ್ಕೃತಿಕ, ಧಾರ್ಮಿಕ ಆಕ್ರಮಣಕಾರರಾಗಿ ಬಂದವರು ಈಗಲೂ ಪ್ರಭಾವ ಬೀರುತ್ತಿದ್ದಾರೆ ಎಂದರು.

ಹಿಂದುಗಳು ಶೇ.85ರಷ್ಟಿದ್ದರೂ ಮುಕ್ತವಾಗಿ ಗಣೇಶೋತ್ಸವ ಮಾಡುವುದು ಕಷ್ಟಕರವಾಗಿದೆ. ಒಂದು ವೇಳೆ ಹಿಂದುಗಳು 15%, 20%, 30% ಅಥವಾ ಶೇ.50 % ಸಮನಾದರೆ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಕಸುಬು, ವೃತ್ತಿ ಆಧಾರದಲ್ಲಿ ಜಾತಿ ಹುಟ್ಟಿದ್ದು, ಜಾತಿಗೆ ಮುಂಚೆ ವರ್ಣಾಶ್ರಮ ಇತ್ತು ಎಂದು ಹೇಳಿದರು.

ಹಿಂದು ಸಮಾಜವನ್ನು ದುರ್ಬಲಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ನಾವು ಒಟ್ಟಾಗದಿದ್ದರೆ ದೇಶ, ಧರ್ಮ ಉಳಿಯುವುದಿಲ್ಲ. ಹೆಚ್ಚು ಅಂದರೆ ಇನ್ನೂ ಐವತ್ತು ವರ್ಷ ಉಳಿಯುತ್ತೇವೆ. ಶ್ರೀಮಂತರು ಮದುವೆಯಾಗಿ ಹತ್ತು ವರ್ಷವಾದರು ಮಕ್ಕಳು ಮಾಡಿಕೊಂಡಿಲ್ಲ. ಸರ್ಕಾರಿ ನೌಕರಿಯಲ್ಲಿರುವ ದಂಪತಿಗೆ ಒಂದು ಮಗು ಇದೆ. ಅವರಿಗೆ ಒಂದು ಮಗು ಸಾಕಾಗಬಹುದು. ಆದರೆ ದೇಶಕ್ಕೆ ಸಾಕಾಗುವುದಿಲ್ಲ. ಹಿಂದುಗಳ ಜನಸಂಖ್ಯೆ ಕಡಿಮೆಯಾದಷ್ಟೂ ದೇಶ, ಸಂಸ್ಕೃತಿಯನ್ನು ಕಳೆದುಕೊಳ್ಳತ್ತೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದುಗಳ ಸಂಖ್ಯೆ ಕುಸಿಯಬಾರದು. ಜನಸಂಖ್ಯೆ ಕುಸಿದರೆ ನರಮೇಧ ನಡೆಯಲಿದೆ. ಹಿಂದುಗಳು ಜನಸಂಖ್ಯೆ ಕುಸಿದರೆ ನಮ್ಮ ದೇವಾಲಯಗಳೂ ಉಳಿಯುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಪರಮ ಗಂಗಾಧರ್, ಮುಖಂಡರಾದ ಸಿ.ಆರ್.ಚಿದಾನಂದ್, ಜಗದೀಶ್, ಮಂಜುನಾಥ್, ಗುಂಡ ಶೆಟ್ಟಿಹಳ್ಳಿ, ರೂಪೇಶ್, ಬಸವರಾಜ್, ಜಯಣ್ಣ, ಶ್ರೀನಿವಾಸ್, ಕಾರ್ತಿಕ್, ಮಂಜಣ್ಣ, ಮಣಿಕಂಠ, ಸಂತೋಷ್, ಅವಿನಾಶ್, ಗೌತಮ್, ಪ್ರಣಿತ್, ಪುನೀತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net