

ಹುಬ್ಬಳ್ಳಿ : ಹಿಂದುಗಳ ದೊಡ್ಡ ಹಬ್ಬವಾಗಿರುವ ಗಣೇಶೋತ್ಸವಕ್ಕೆ ಧ್ವನಿವರ್ಧಕಗಳ ಬಳಕೆಗೆ ಮಿತಿ ಹೇರಬಾರದು ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಹೇಳಿದ್ದಾರೆ.
ಮಹಾರಾಷ್ಟ್ರದ ಮುಂಬೈ ಹೊರತುಪಡಿಸಿದರೆ ಹುಬ್ಬಳ್ಳಿ- ಧಾರವಾಡದಲ್ಲಿ ಆಚರಿಸುವ ಗಣೇಶೋತ್ಸವ ಲಕ್ಷಾಂತರ ಜನರ ಆಕರ್ಷಣೀಯ ಕೇಂದ್ರವಾಗಿದೆ ಎಂದು ಪ್ರಕಟಣೆಯಲ್ಲಿ ಪ್ರದೀಪ ಶೆಟ್ಟರ್ ತಿಳಿಸಿದ್ದಾರೆ.
ಈ ಹಬ್ಬದಲ್ಲಿ ವಿದ್ಯುತ್ ಅಲಂಕಾರ ಮತ್ತು ಧ್ವನಿವರ್ಧಕ ಪ್ರಮುಖ ಆಕರ್ಷಣೆೆಯಾಗಿದೆ. ಹೀಗಿರುವಾಗ, ಸರ್ಕಾರ ಧ್ವನಿ ವರ್ಧಕ ಹಚ್ಚುವುದಕ್ಕೆ ಸಮಯ ನಿರ್ಬಂಧನೆ ಹಾಕುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸವೋಚ್ಛ ನ್ಯಾಯಾಲಯದ ಆದೇಶದ ಪ್ರಕಾರ ರಾಜ್ಯ ಸರ್ಕಾರವು ಧ್ವನಿವರ್ಧಕ ಬಳಸಬಹುದು. ಹೆಚ್ಚು ಧ್ವನಿವರ್ಧಕ ಬಳಸಲು ಸುಪ್ರೀಂ ಕೋರ್ಟ್ನ ನಿರ್ಬಂಧ ಇರುವುದಿಲ್ಲ. ಆದರೆ, ಇತ್ತೀಚಿನ ಸರ್ಕಾರದ ನೀತಿ, ನಿಯಮಗಳ ನೆಪದ ಮೂಲಕ ಧ್ವನಿವರ್ಧಕ ಬಳಕೆಗೆ ಸಮಯ ನಿಗದಿಗೊಳಿಸಲಾಗಿದೆ. ಇದರಿಂದ ಹಬ್ಬಕ್ಕೆ ಮೆರಗು ಬಾರದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2021 ರಲ್ಲಿ ಅಂದಿನ ಪೊಲೀಸ್ ಆಯುಕ್ತ ಲಾಬು ರಾಮ್ ಅವರು ರಾತ್ರಿ 10 ಗಂಟೆ ನಂತರ ಧ್ವನಿವರ್ಧಕ ಬಳಕೆ ನಿಷೇದಗೊಳಿಸಿ, ತಪ್ಪು ಸಂದೇಶ ರವಾನಿದ್ದರು ಎಂದು ತಿಳಿಸಿದ್ದಾರೆ.
ಗಣೇಶ ಹಬ್ಬದ ಆಚರಣೆಗೆ ಸುಪ್ರೀಂ ಕೋರ್ಟ್ ಯಾವುದೇ ನಿಯಮ ಮತ್ತು ನಿಷೇಧಗಳನ್ನು ಹೇರಿಲ್ಲ. ಆದಕಾರಣ, ಧ್ವನಿವರ್ಧಕ ಬಳಕೆಗೆ ಸರ್ಕಾರ ಅನುಮತಿ ನೀಡಬೇಕು ಎಂದು ಪ್ರದೀಪ ಶೆಟ್ಟರ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.