ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಿ, ಡಿವಿಪಿಯಿಂದ ಜನಾಂದೋಲನ

DVP JANANDOLANA
ವಿಜಯಪುರ ನಗರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ಪ್ರತಿಭಟನೆ ನಡೆಸಿದರು. ಶ್ರೀನಾಥ ಪೂಜಾರಿ, ಅಕ್ಷಯ್ ಕುಮಾರ ಅಜಮನಿ, ಅನಿಲ್ ಹೊಸಮನಿ ಮತ್ತಿತರರಿದ್ದಾರೆ.
Published on

ವಿಜಯಪುರ: ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವೈದ್ಯಕೀಯ ಕಾಲೇಜ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಇದೀಗ ದಲಿತ ವಿದ್ಯಾರ್ಥಿ ಪರಿಷತ್ ಜನಾಂದೋಲನ ಆರಂಭಿಸಿದೆ.

ಈಗಾಗಲೇ ಹಲವು ಸುತ್ತಿನ ಹೋರಾಟ ಕೈಗೊಳ್ಳಲಾಗಿದ್ದು, ಮುಂದುವರಿದ ಭಾಗವಾಗಿ ಹಳ್ಳಿ ಹಳ್ಳಿಗಳಲ್ಲಿ ಜನಾಂದೋಲನ ರೂಪಿಸಲು ಸಲ್ಲಾಗಿದೆ. ಪರಿಣಾಮ ಗುರುವಾರ ಪ್ರತಿಭಟನೆ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಪರಿಷತ್ ಪದಾಧಿಕಾರಿಗಳು, ‘ಕೂಡಲೇ ಸರ್ಕಾರದಿಂದ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕು’ ಎಂದು ಪಟ್ಟು ಹಿಡಿದರು. ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿ, ಕಳೆದ 20 ವರ್ಷಗಳಿಂದ ವೈದ್ಯಕೀಯ ಕಾಲೇಜ್‌ಗಾಗಿ ಹೋರಾಟ ಹಮ್ಮಿಕೊಂಡು ಬರಲಾಗಿದೆ. ಪರಿಣಾಮ ಈ ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಮಂಜೂರಿಸಲಾಗಿದೆ. ನಂತರ ಬಂದ ಬಿಜೆಪಿ ಸರ್ಕಾರ ಅದನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲು ಮುನ್ನುಡಿ ಬರೆಯಿತು. ಇದೀಗ ಚರ್ಚೆ ಮುನ್ನೆಲೆಗೆ ಬಂದಿದ್ದು, ಸರ್ಕಾರ ಪಿಪಿಪಿ ಮಾದರಿಯಲ್ಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಒಲವು ತೋರುತ್ತಿರುವುದು ಖಂಡನೀಯ. ಇದರಿಂದ ಖಾಸಗೀಕರಣಕ್ಕೆ ಹೆಚ್ಚು ಆದ್ಯತೆ ನೀಡಿದಂತಾಗಲಿದ್ದು, ಇಡೀ ವ್ಯವಸ್ಥೆಯೇ ಹಳಿ ತಪ್ಪಲಿದೆ. ಹೀಗಾಗಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂದು ಆಗ್ರಹಿಸಿದರು.

ಖಾಸಗಿ ಸಹಭಾಗಿತ್ವ ಅಂದರೆ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುವಂಥದ್ದು. ಈಗಾಗಲೇ ಜಿಲ್ಲೆಯಲ್ಲಿ ಎರಡು ಖಾಸಗಿ ಮೆಡಿಕಲ್ ಕಾಲೇಜುಗಳಿದ್ದು, ಇದಕ್ಕೆ ಕೋಟ್ಯಂತರ ಶುಲ್ಕ ಕಟ್ಟಲು ಸಾಧ್ಯವಾಗದೇ, ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಆಗದೆ ತಮ್ಮ ಆಶೆಯನ್ನೇ ಬಲಿಕೊಟ್ಟಿದ್ದಾರೆ. ಇದೀಗ ಮತ್ತದೇ ವ್ಯವಸ್ಥೆಗೆ ಮುನ್ನುಡಿ ಬರೆಯುವುದನ್ನು ವಿರೋಧಿಸುವುದಾಗಿ ತಿಳಿಸಿದರು.

ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ ಅಜಮನಿ ಮಾತನಾಡಿ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣದಿಂದ ಮುಕ್ತಗೊಳಿಸಬೇಕು. ಸರ್ಕಾರವೇ ನಿರ್ವಹಿಸುವಂತಾಗಬೇಕು. ಈಗಾಗಲೇ ಉನ್ನತ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಬಡವರಿಂದ ದೂರುವಾಗುತ್ತಿವೆ. ಆರೋಗ್ಯ ಮತ್ತು ಶಿಕ್ಷಣ ಮಾರಾಟವಾಗುತ್ತಿರುವುದು ಈ ದೇಶದ ದುರಂತ ಎಂದರು.

ಹಿರಿಯ ಚಿಂತಕರಾದ ಅನಿಲ್ ಹೊಸಮನಿ, ವಿದ್ಯಾವತಿ ಅಂಕಲಗಿ, ವೆಂಕಟೇಶ್ ಒಗ್ಗೆಣ್ಣವರ, ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಮಾದೇಶ ಚಲವಾದಿ, ಸಂದೇಶ್ ಕುಮಟಗಿ, ಯಾಷಿನ್ ಇನಾಮದಾರ, ಯುವರಾಜ್ ಓಲೇಕಾರ, ಶಂಕರ ಬಸರಗಿ, ದಾವೂದ್ ನಾಯ್ಕೋಡಿ, ಯಮನೂರಿ ಮಾದರ, ಯಮನೂರಿ ಸಿಂದಗಿರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net