ಸರ್ಕಾರಕ್ಕೆ ಅನ್ನಭಾಗ್ಯ ನಿರ್ವಾಹಣೆ ಸಾಧ್ಯವಾಗುತ್ತಿಲ್ಲ

31 Dwd 4 Jagadish Shettar
Published on

ಹುಬ್ಬಳ್ಳಿ : ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯಯೋಜನೆ ನೀಡಲು ಸರ್ಕಾರಕ್ಕೆ ಆಗುತ್ತಿಲ್ಲ. ಹೀಗಾಗಿ, ಬಿಪಿಎಲ್ ಕಾರ್ಡ್ ರದ್ದುಗೊಳಿಸಿ, ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೋಗಸ್ ಬಿಪಿಎಲ್ ಕಾರ್ಡ್​ಗಳು ಇರುವ ಬಗ್ಗೆ ಸರ್ಕಾರಕ್ಕೆ ಈಗ ಜ್ಞಾನೋದಯ ಆಗಿದೆ ಎನಿಸುತ್ತದೆ. ಕೋಟ್ಯಾಂತರ ಕಾರ್ಡ್​ಗಳನ್ನು ರದ್ದುಗೊಳಿಸಿ, ಬಡವರಿಗೆ ತೊಂದರೆ ನೀಡಲಾಗುತ್ತಿದೆ ಎಂದರು.

ಸರ್ಕಾರದಿಂದ ಯಾವುದಾದರೂ ತನಿಖೆಯ ಆಯೋಗ ರಚಿಸಿದರೆ ಅದರ ಸಂಪೂರ್ಣ ವರದಿ ಮುಖ್ಯಮಂತ್ರಿ ಅವರಿಗೆ ನೀಡಬೇಕು. ಬಳಿಕ ಸಚಿವ ಸಂಪುಟದಲ್ಲಿ ತೀಮಾನ ಮಾಡಿ, ಸದನದಲ್ಲಿ ಮಂಡಿಸುವುದು ಪ್ರಕ್ರಿಯೆ. ಆದರೆ, ಸರ್ಕಾರ ರಾಜ್ಯದಲ್ಲಿ ಉಪಚುನಾವಣೆ ಇರುವುದರಿಂದ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡಲು ತರಾತುರಿಯಲ್ಲಿ ಮಧ್ಯಂತರ ವರದಿ ಪಡೆಯಿತು. ಇದು ಹಸ್ತಾಂತರ ಆದ ಬಳಿಕ ಕೆಲವು ಮಾಹಿತಿ ಸಿಎಂ ಅಥವಾ ನ್ಯಾಯಮೂರ್ತಿ ಡಿ. ಕುನ್ಹಾ ಆಯೋಗ ಕಚೇರಿಯಿಂದ ಸೋರಿಕೆಯಾಗಿವೆ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಮಾಡುವ ಮೂಲಕ ಕಾನೂನು ವ್ಯವಸ್ಥೆ ಯನ್ನು ದುರಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಶಾಸಕರ ಖರೀದಿ ಬಗ್ಗೆ ಸರ್ಕಾರದ ಬಳಿ ಆಧಾರಗಳಿದ್ದರೆ ಬಿಡುಗಡೆ ಮಾಡಲಿ ಎಂದು ಶೆಟ್ಟರ್ ಸವಾಲು ಹಾಕಿದರು.

ಶಾಸಕ ರವಿ ಗಾಣಿಗ ಅವರಿಂದ ಉದ್ದೇಶ ಪೂರಕವಾಗಿ ಹೇಳಿಕೆ ಕೊಡಿಸಿದ್ದಾರೆ. ಮುಡಾ, ವಾಲ್ಮೀಕಿ ಹಗರಣದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ದಿನದಿಂದ ದಿನಕ್ಕೆ ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಕಡಿಮೆ ಆಗುತ್ತಿದೆ. ಇನ್ನೂ ಜನಸಾಮಾನ್ಯರು ಹಗರಣದ ಬಗ್ಗೆ ಮಾತನಾಡುತ್ತಿದ್ದು, ಇದನ್ನು ವಿಷಯಾಂತರ ಮಾಡಲು ಈ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರ ಮೂಲಕ ಸುಳ್ಳು ಮಾಡಿಸುತ್ತಿದ್ದಾರೆ. ಇದು ಅವರ ಸ್ಥಾನಕ್ಕೆ ಯೋಗ್ಯವಾದ ಕೆಲಸವಲ್ಲ. ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುವುದು ಕಾಂಗ್ರೆಸ್​ನ ತಂತ್ರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಬೆಳಗಾವಿ ಅಧಿವೇಶನ ಯಾವ ಪುರುಷಾರ್ಥಕ್ಕೆ ಮಾಡುತ್ತಿದೆ ಗೊತ್ತಿಲ್ಲ. ಸರ್ಕಾರಿ ರಜೆ ಹಾಗೂ ಇನ್ನಿತರ ಕಾರಣಗಳಿಂದ ಕೇವಲ 6 ದಿನ ಮಾತ್ರ ಅವಕಾಶ ಸಿಗುತ್ತದೆ. ಕನಿಷ್ಠವಾಗಿ 1 ತಿಂಗಳ ಅಥವಾ 20 ದಿನ ಅವೇಶನ ನಡೆಯಬೇಕು. ಇಲ್ಲವಾದರೆ ಬೆಳಗಾವಿ ಪ್ರವಾಸ ತಾಣವಾಗಲಿದೆ. ಉತ್ತರ ಕರ್ನಾಟಕದ ಬಗ್ಗೆ ಕೇವಲ ಕಣ್ಣೀರು ಸುರಿಸುವುದಾಗಿದೆ ಹೊರತು ಸರ್ಕಾರಕ್ಕೆ ಈ ಭಾಗದ ಬಗ್ಗೆ ಯಾವುದೇ ಕಳಕಳಿ ಇಲ್ಲ ಎಂದರು.

ಮಹಾರಾಷ್ಟ್ರ ಚುನಾವಣೆಯಲ್ಲಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜಾರ್ಖಾಂಡ್​ನಲ್ಲಿ ಆಡಳಿತದಲ್ಲಿರುವ ಸರ್ಕಾರ ಭ್ರಷ್ಟಾಚಾರ ಹಾಗೂ ಇನ್ನಿತರ ಕಾರಣದಿಂದ ಜನ ವಿರೋಧಿಯಾಗಿದೆ. ಈ ಹಿನ್ನೆಲೆ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net