ಚಾಮುಂಡಿಬೆಟ್ಟಕ್ಕೆ ಮತ್ತೆ ರೋಪ್‌ವೇ ಗುಮ್ಮ

Chamundi hill 1
Published on
  • ಪರಿಸರ ಉಳಿಸಲು ಮತ್ತೆ ಹೋರಾಟ
  • ಮುಖ್ಯಮಂತ್ರಿ ಗಮನ ಸೆಳೆಯಲು ನಿರ್ಧಾರ

ಸದೇಶ್ ಕಾರ್ಮಾಡ್ ಮೈಸೂರು
ಚಾಮುಂಡಿಬೆಟ್ಟದ ಜೀವವೈವಿಧ್ಯತೆ ಉಳಿಸಲು ಸರ್ಕಾರವೇ ಕೈಬಿಟ್ಟ ರೋಪ್‌ವೇ ಯೋಜನೆಗೆ ಇದೀಗ ಮರುಜೀವ ನೀಡುವ ಪ್ರಯತ್ನ ಪ್ರಾರಂಭವಾಗಿದ್ದು, ಬೆಟ್ಟದ ಪರಿಸರ ಉಳಿಸಲು ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧತೆ ಪ್ರಾರಂಭಗೊಂಡಿದೆ.
ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ಸಂದರ್ಭ ರೋಪ್ ವೇ ಯೋಜನೆ ಜಾರಿಗೆ ಪ್ರಯತ್ನ ನಡೆಸಲಾಯಿತು. ಆ ಸಂದರ್ಭ ಪರಿಸರವಾದಿಗಳು ಹಾಗೂ ನಗರದ ನಾಗರಿಕರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಯೋಜನೆಯನ್ನು ಕೈ ಬಿಡುವ ಅಧಿಕೃತ ನಿರ್ಧಾರವನ್ನು ಪ್ರಕಟಿಸಿತು.

ಪರಿಸರ ಉಳಿಸಲು ಹಾಗೂ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಯೋಜನೆ ಕೈ ಬಿಡಲಾಗುವುದು ಎಂದು ಘೋಷಿಸಿದ್ದರು. ಆದರೆ, ಯೋಜನೆ ಜಾರಿಗೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಸಂಘ ಸಂಸ್ಥೆಗಳು ನಿರಂತರವಾಗಿ ಒತ್ತಡ ಹೇರಲು ಪ್ರಾರಂಭಿಸಿದರು. ಇದರ ಪರಿಣಾಮ ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಯಾರು ವಿರೋಧ ವ್ಯಕ್ತಪಡಿಸದೆ ಇದ್ದರೆ ರೋಪ್‌ವೇ ಯೋಜನೆ ಜಾರಿಗೊಳಿಸಲಾಗುವುದು’ ಎಂದು ಹೇಳಿಕೆ ನೀಡುವ ಮೂಲಕ ರೋಪ್‌ವೇ ಯೋಜನೆಯನ್ನು ಮತ್ತೆ ಮುನ್ನಲೆಗೆ ತಂದಿದ್ದಾರೆ.

ಬೆಟ್ಟದಲ್ಲಿ ರೋಪ್ ವೇ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡರೆ ಭವಿಷ್ಯದಲ್ಲಿ ಭೂ ಕುಸಿತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಬೆಟ್ಟದಲ್ಲಿ ನೆಲೆಸಿರುವ ಪ್ರಾಣಿ, ಪಕ್ಷಿ ಸಂಕುಲಗಳು ತಮ್ಮ ಆವಾಸಸ್ಥಾನವನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಬೆಟ್ಟದ ಮೇಲ್ಭಾಗದಲ್ಲಿ ನಿರಂತರ ಅಭಿವೃದ್ಧಿ ಚಟುವಟಿಕೆಯ ಪರಿಣಾಮ ಬೆಟ್ಟದಲ್ಲಿ ಕಾಲ ಕ್ರಮೇಣ ನೀರು ಇಂಗುವಿಕೆಯ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿದ್ದು, ಇದರಿಂದ ಭಾರಿ ಮಳೆ ಸುರಿದ ಸಂದರ್ಭ ನೀರು ಭೂಮಿಯಲ್ಲಿ ಇಂಗದೆ ರಭಸವಾಗಿ ಹರಿಯುವಾಗ ಭೂ ಸವಕಳಿ ಉಂಟಾಗಿ ಭೂ ಕುಸಿತ ಉಂಟಾಗುವ ಸಾಧ್ಯತೆ ಹೆಚ್ಚಿದೆ.

ಚಾಮುಂಡಿಬೆಟ್ಟ ಪಾರಂಪರಿಕವಾಗಿ ಬಹಳ ಮಹತ್ವ ಹೊಂದಿರುವ ಸ್ಥಳವಾಗಿದ್ದು, ಬೆಟ್ಟದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಪರಂಪರೆ, ಪುರಾತತ್ವ ಮತ್ತು ಐತಿಹಾಸಿಕ ಪರಂಪರೆ, ನೈಸರ್ಗಿಕ ಪರಂಪರೆ, ಜೀವವೈವಿಧ್ಯತೆಯ ಪರಂಪರೆಗಳನ್ನು ಕಾಣಬಹುದು. ಈ ಪರಂಪರೆ ಗಳನ್ನು ಉಳಿಸಿಕೊಳ್ಳಲು ಬೆಟ್ಟದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಅವಶ್ಯಕತೆ ಇದೆ.

ಬೆಟ್ಟದಲ್ಲಿ 500 ವಿವಿಧ ಬಗೆಯ ಗಿಡ, ಮರಗಳು ಇವೆ. ಅಳಿವಿನ ಅಂಚಿನಲ್ಲಿರುವ ಕಿರುಬ, ಚಿಪ್ಪು ಹಂದಿ ಸೇರಿದಂತೆ ಹಲವು ಪ್ರಾಣಿಗಳು ಇವೆ. ಒಟ್ಟು 193 ಪಕ್ಷಿ ಪ್ರಬೇಧ ಇಲ್ಲಿ ಕಂಡು ಬರುತ್ತಿದ್ದು, ತೀರಾ ಅಪರೂಪದ ಪಕ್ಷಿ ಪ್ರಬೇಧಗಳನ್ನ ಸಹ ಕಾಣಬಹುದು. ಒಟ್ಟು 170 ವಿವಿಧ ಬಗೆಯ ಚಿಟ್ಟೆಗಳು ಬೆಟ್ಟದಲ್ಲಿವೆ. ಬೆಟ್ಟದ ಪರಿಸರ ನಾಶವಾದರೆ ಇವೆಲ್ಲವೂ ತಮ್ಮ ಮೂಲನೆಲೆ ಕಳೆದುಕೊಂಡು ನಾಶವಾಗುವುದು ನಿಶ್ಚಿತ. ನಗರಕ್ಕೆ ಪ್ರವಾಸಿಗರನ್ನು ಸೆಳೆಯಲು ವಿವಿಧ ಯೋಜನೆಗಳನ್ನು ಸರ್ಕಾರ ರೂಪಿಸಲಿ. ಆದರೆ, ಬೆಟ್ಟದ ಪರಿಸರ ನಾಶ ಮಾಡಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವುದು ಸರಿಯಲ್ಲ ಎಂಬುದು ಪರಿಸರವಾದಿಗಳ ಅಭಿಪ್ರಾಯವಾಗಿದೆ.

ಮತ್ತೆ ಹೋರಾಟದ ಹಾದಿ:

ಚಾಮುಂಡಿಬೆಟ್ಟದಲ್ಲಿ ರೋಪ್‌ವೇ ಯೋಜನೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ ನಂತರ ಚಾಮುಂಡಿಬೆಟ್ಟ ಉಳಿಸಿ ಸಮಿತಿ ಸಮಿತಿ ವತಿಯಿಂದ ತುರ್ತು ಸಭೆ ನಡೆಸಿ ಮುಂದಿನ ಹೋರಾಟದ ಕುರಿತು ಚರ್ಚಿಸಲಾ ಯಿತು. ರೋಪ್‌ವೇ ಯೋಜನೆಯಿಂದ ಉಂಟಾಗುವ ಅನಾಹುತದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅವರಿಗೆ ಮನವರಿಕೆ ಮಾಡಿಕೊಡಲು ತೀರ್ಮಾನಿಸಲಾಗಿದೆ.

ಪಾರಂಪರಿಕ ತಜ್ಞ ಪ್ರೊ. ಎನ್.ಎಸ್. ರಂಗರಾಜು, ಸ್ಟ್ರಕ್ಚರಲ್ ಇಂಜಿನಿಯರ್ ಡಾ. ಮೇಜರ್ ಜನರಲ್ ಸುಧೀರ್ ಒಂಬತ್ಕೆರೆ, ಜಲತಜ್ಞ ಪ್ರೊ.ಯು.ಎನ್. ರವಿಕುಮಾರ್, ಪರಿಸರ ತಜ್ಞ ಎ. ಶಿವಪ್ರಕಾಶ್ ಅಡವಣ್ಣೆ, ಭೂಗರ್ಭ ಶಾಸ್ತ್ರಜ್ಞ ಪ್ರೊ. ಜನಾರ್ದನ, ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಅವರು ರೋಪ್‌ವೇ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮದ ಕುರಿತು ನೀಡಿರುವ ವರದಿಯನ್ನು ಮುಖ್ಯಮಂತ್ರಿ ಗಮನಕ್ಕೆ ತರಲು ಹಾಗೂ ಯೋಜನೆ ಪರವಾಗಿ ಮಾತನಾಡುತ್ತಿರುವ ವರನ್ನು ಸಹ ಭೇಟಿಯಾಗಿ ಅವರ ಮನವೊಲಿಸುವ ಕಾರ್ಯ ಮಾಡಲು ಪರಿಸರವಾದಿಗಳು ಚಿಂತನೆ ನಡೆಸುತ್ತಿದ್ದಾರೆ.

ಚಾಮುಂಡಿಬೆಟ್ಟದ ಪರಿಸರ ಉಳಿಸುವ ನಿಟ್ಟಿನಲ್ಲಿ ರೋಪ್‌ವೇ ಯೋಜನೆ ಕೈಗೊಳ್ಳುವುದಿಲ್ಲ ಎಂದು ಕಳೆದ ಬಾರಿ ರಾಜ್ಯ ಸರ್ಕಾರವೇ ಅಧಿಕೃತವಾಗಿ ಘೋಷಿಸಿತ್ತು. ಆದರೆ, ಇದೀಗ ಮತ್ತೆ ಯೋಜನೆ ಜಾರಿಗೆ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಪರಿಸರ ಉಳಿಸುವ ನಿಟ್ಟಿನಲ್ಲಿ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಅವರಿಗೆ ಮನವಿಪತ್ರ ಸಲ್ಲಿಸಲಾಗುವುದು. ಯೋಜನೆಗೆ ನಿರಂತರವಾಗಿ ಒತ್ತಾಯ ಮಾಡುತ್ತಿರುವ ಹೋಟೆಲ್ ಮಾಲೀಕರ ಸಂಘದವರ ಮನವೊಲಿಸುವ ಕಾರ್ಯವನ್ನು ಸಹ ಮಾಡಲಾಗು ವುದು.
ಪರಶುರಾಮೇಗೌಡ,
ಸದಸ್ಯ, ಚಾಮುಂಡಿಬೆಟ್ಟ ಉಳಿಸಿ ಸಮಿತಿ

ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಚಾಮುಂಡಿಬೆಟ್ಟಕ್ಕೆ ರೋಪ್‌ವೇ ಅವಶ್ಯಕತೆ ಇದೆ. ಯೋಜನೆ ಜಾರಿಗೆ ಮುಖ್ಯಮಂತ್ರಿ ಒಲವು ತೋರಿರುವುದು ಸ್ವಾಗತಾರ್ಹ. ಬೆಟ್ಟದ ಪರಿಸರಕ್ಕೆ ಯಾವುದೇ ರೀತಿಯ ಹಾನಿ ಉಂಟಾಗದ ರೀತಿಯಲ್ಲಿ ವೈಜ್ಞಾನಿಕವಾಗಿ ರೋಪ್‌ವೇ ಯೋಜನೆ ಜಾರಿಗೆ ಅವಕಾಶವಿದ್ದು, ಇದಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕಷ್ಟೆ. ಪರಿಸರವಾದಿಗಳು ಯೋಜನೆಗೆ ಸಹಕಾರ ನೀಡಬೇಕು. ರೋಪ್‌ವೇ ಯೋಜನೆ ಜತೆಗೆ ಡಿಸ್ನಿ ಲ್ಯಾಂಡ್ ಯೋಜನೆಯನ್ನು ಸಹ ಜಾರಿಗೊಳಿಸಲು ಮುಖ್ಯಮಂತ್ರಿ ಅವರ ಗಮನ ಸೆಳೆಯಲಾಗಿದೆ.
ನಾರಾಯಣ ಗೌಡ,
ಅಧ್ಯಕ್ಷ, ಹೋಟೆಲ್ ಮಾಲೀಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net