ಸಾಲದ ಸುಳಿಯಲ್ಲಿ ಸಿಲುಕಿದೆ ಸರ್ಕಾರ

BYD BOMMAYI
Published on

ಬ್ಯಾಡಗಿ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಪರಿಣಾಮ ಆರ್ಥಿಕ ಸ್ಥಿತಿ ಹದಗೆಟ್ಟು ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ. ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೆ ಅಭಿವೃದ್ಧಿ ಶೂನ್ಯವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಅಭಿನಂದನೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ 1 ಲಕ್ಷದ 5 ಸಾವಿರ ಕೋಟಿ ರೂ.ಸಾಲದ ಸುಳಿಯಲ್ಲಿದ್ದು, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲವಾಗಿದೆ. ರಸ್ತೆ, ನೀರಾವರಿ ಯೋಜನೆಗಳ ದುರಸ್ತಿಗೂ ಹಣಕಾಸಿನ ತೊಂದರೆಯಿದೆ. ಇಂತಹ ಸರ್ಕಾರ ಬೇಕೆ ಬೇಡವೇ ಎನ್ನುವ ಚರ್ಚೆ ಶುರುವಾಗಿದೆ. ರಾಜ್ಯದಲ್ಲಿ ರಾಜಕೀಯ ಬದಲಾವಣೆ ಸುಳಿವು ನೀಡಿದ ಅವರು, ಜನರ ಅಪೇಕ್ಷೆ ಬದಲಾಗಿದೆ. ಪ್ರಜೆಗಳು ಹಾಗೂ ರಾಜನ ನಡುವೆ ಸಂಘರ್ಷ ಉಂಟಾದಲ್ಲಿ ಜನರಿಗೆ ಗೆಲುವು ಸಿಗಲಿದೆ ಎಂದರು.

ಲೋಕಸಭೆ ಚುನಾವಣೆ ಮತದಾನದ 2 ದಿನದ ಹಿಂದೆ ರಾಜ್ಯ ಸರ್ಕಾರ ಏಪ್ರಿಲ್, ಮೇ ತಿಂಗಳ ಶಕ್ತಿಯೋಜನೆ 4 ಸಾವಿರ ರೂ. ಜಮೆ ಮಾಡಿದೆ. ಏನೇ ಆಮಿಷ ಒಡ್ಡಿದರೂ ಮತದಾರರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಆದರೆ ಚುನಾವಣೆ ಆಯೋಗ ಮೌನವಾಗಿತ್ತು ಎಂದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಬಹುದಿನಗಳ ಬೇಡಿಕೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ನದಿಯನ್ನು ಹಾವೇರಿ ಜಿಲ್ಲೆಯ ವರದಾ ನದಿಗೆ ಜೋಡಿಸುವ ಮೂಲಕ ಬೃಹತ್ ನೀರಾವರಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರು, ಮಾಜಿ ಶಾಸಕ ಶಿವರಾಜ ಸಜ್ಜನ, ಬಸವರಾಜ ಛತ್ರದ, ಹಾಲೇಶ ಜಾಧವ, ವಿದ್ಯಾಶೆಟ್ಟಿ, ಪದ್ಮಾವತಿ ಯೋಗಿ, ಗವಿಶಿದ್ದಪ್ಪ ದ್ಯಾಮಣ್ಣನವರ, ಮುರಿಗೆಪ್ಪ ಶೆಟ್ಟರ, ವಿಜಯ ಬಳ್ಳಾರಿ, ಶಿವಬಸಪ್ಪ ಕುಳೇನೂರು, ರಾಜು ಹೊಸಕೇರಿ,ಚಂದ್ರಪ್ಪ ಶೆಟ್ಟರ, ವಿನಯ ಹಿರೇಮಠ ಹಾಗೂ ಪುರಸಭೆ ಸದಸ್ಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net