ಸರ್ಕಾರಕ್ಕಿಲ್ಲ ಅಭಿವೃದ್ಧಿಯ ಚಿಂತೆ

23 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾಂಗ್ರೆಸ್​ಗೆ ರಾಜ್ಯ ಅಭಿವೃದ್ಧಿ ಮಾಡುವ ಮನಸ್ಸಿನಲ್ಲ. ಅಭಿವೃದ್ಧಿ ಯೋಜನೆಗಳ ಅನುಷ್ಠಾನವಿಲ್ಲದೇ ಜನರಿಗೆ ತೊಂದರೆಯಾಗಿದೆ. ರಾಜ್ಯ ಸರ್ಕಾರ ಶಾಸಕರಿಗೆ ನಯಾಪೈಸೆ ಅನುದಾನ ನೀಡದ ಕಾರಣ ಅಭಿವೃದ್ಧಿ ಕಾಮಗಾರಿ ನಡೆಸುವುದು ಕಷ್ಟಕರವಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನವರಿಗೆ ಸರ್ಕಾರ ನಡೆಸುವುದು ಅಸಾಧ್ಯವಾಗಿದೆ. ಅವರು ಕಚ್ಚಾಟದಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ ಹೊರತು ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಇದೇ ಕಾರಣಕ್ಕೆ ರಾಜ್ಯದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ ಎಂದು ದೂರಿದರು.
ಹು-ಧಾ ಬಿಆರ್​ಟಿಎಸ್​ ಯೋಜನೆ ಉತ್ತಮವಾಗಿದೆ. ಆದರೆ ವಿನ್ಯಾಸ ಮತ್ತು ಅನುಷ್ಠಾನದಲ್ಲಿ ಸಾಕಷ್ಟು ನ್ಯೂನ್ಯತೆಗಳಾಗಿವೆ. ಸಮಗ್ರ ದೃಷ್ಟಿಯಿಂದ ಅವಲೋಕಿಸದೆ ವಿನ್ಯಾಸ ಮಾಡಿದ ವಿನ್ಯಾಸಗಾರನನ್ನು ಗಲ್ಲಿಗೇರಿಸುವುದು ಸೂಕ್ತ. ಯೋಜನೆ ಅನುಷ್ಠಾನ ಸಮಯದಲ್ಲಿ ನಾನು ಕೆಲ ಸಲಹೆ ನೀಡಿದ್ದೆ. ಆದರೆ ಅದರಂತೆ ಸಮರ್ಪಕ ವಿನ್ಯಾಸ ಮಾಡದ ಕಾರಣ ಜನರು ತೊಂದರೆ ಅನುಭವಿಸುವಂತಾಗಿದೆ ಎಂದರು.
ಈ ಯೋಜನೆಯನ್ನು ಪುನರ್​ ವಿನ್ಯಾಸ ಮಾಡುವುದು ಅತ್ಯಂತ ಅವಶ್ಯಕ. ವಾಹನ ದಟ್ಟಣೆ ಹಿನ್ನೆಲೆಯಲ್ಲಿ ಟೋಲ್​ನಾಕಾದಿಂದ ಕೋರ್ಟ್​ ವೃತ್ತದವರೆಗೆ ಬಿಆರ್​ಟಿಎಸ್​ ಬ್ಯಾರಿಕೇಡ್​ ತೆರವು ಮಾಡುವುದು ಸೂಕ್ತ ಎಂದರು.
ಧಾರವಾಡಕ್ಕೆ ಮತ್ತೊಂದು ಪೊಲೀಸ್​ ಠಾಣೆ ಆರಂಭಗೊಳ್ಳಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಹೊಸ ಠಾಣೆ ಸ್ಥಾಪನೆಗೆ ಹಲವು ನಿಯಮಗಳಿವೆ. ಅದರಲ್ಲಿ ವಿದ್ಯಾಗಿರಿಯ ಠಾಣೆಯಲ್ಲಿ ಇನ್ನೊಂದು ಠಾಣೆ ನಿಮಿರ್ಸಲು ಅರ್ಹತೆ ಇದೆ. ಇದರೊಂದಿಗೆ ಅವಳಿನಗರ ವ್ಯಾಪ್ತಿಯಲ್ಲಿ ಮತ್ತೊಂದು ಸಂಚಾರ ಪೊಲೀಸ್​ ಠಾಣೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅಧಿವೇಶನದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net