ಜನರ ಆರೋಗ್ಯ ರಕ್ಷಣೆಗೆ ಸರ್ಕಾರ ಬದ್ಧ

ಅರಸೀಕೆರೆ ನಗರದ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ನಮ್ಮ ಕ್ಲಿನಿಕ್ ಕೇಂದ್ರವನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿಸಿದರು. ಸಮೀವುಲ್ಲಾ, ಕೃಷ್ಣ ಮೂರ್ತಿ, ಸತೀಶ್ ಇತರರಿದ್ದರು.
ಅರಸೀಕೆರೆ ನಗರದ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ನಮ್ಮ ಕ್ಲಿನಿಕ್ ಕೇಂದ್ರವನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿಸಿದರು. ಸಮೀವುಲ್ಲಾ, ಕೃಷ್ಣ ಮೂರ್ತಿ, ಸತೀಶ್ ಇತರರಿದ್ದರು.
Published on

ಅರಸೀಕೆರೆ: ಜನರ ಆರೋಗ್ಯ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ಶುಕ್ರವಾರ ನಮ್ಮ ಕ್ಲಿನಿಕ್ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳುತ್ತಿರುವುದು ಆರೋಗ್ಯ ಕ್ಷೇತ್ರದ ಮೇಲೆ ದೊಡ್ಡ ಪೆಟ್ಟು ನೀಡುತ್ತಿದೆ. ಇಂತಹ ಬೆಳವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು. ಪ್ರತಿ ವರ್ಷ ಐದಾರು ಸಾವಿರ ಎಂಬಿಬಿಎಸ್ ಮುಗಿಸಿ ಹೊರ ಬರುತ್ತಿದ್ದು ಇಲ್ಲಿಯೇ ಸೇವೆ ಮಾಡುವ ಕಾನೂನು ರೂಪಿಸುವ ಅಗತ್ಯವಿದೆ ಎಂದರು.

ನಗರದ ಆಯಕಟ್ಟಿನ ಜಾಗದಲ್ಲಿರುವ ಸರ್ಕಾರಿ ಜೆ.ಸಿ.ಆಸ್ಪತ್ರೆಗೆ ಕಾಯಕಲ್ಪ ನೀಡಲಾಗಿದೆ. ವಿವಿಧ ವಿಭಾಗಗಳ ಆರು ವೈದ್ಯರ ಕೊರತೆಯಿದ್ದು, ವೈದ್ಯರನ್ನ ಕರೆ ತರುವ ಎಲ್ಲ ರೀತಿಯ ಪ್ರಯತ್ನ ನಡೆಸಲಾಗಿದೆ. ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲು ಶಿಕ್ಷಣ ಇಲಾಖೆ ಎರಡು ಕೊಠಡಿಗಳನ್ನು ನೀಡಿದೆ. ಎಲ್ಲರ ಸಹಕಾರದಿಂದ ಬಡವರಿಗೆ ಆರೋಗ್ಯ ಸೇವೆ ದೊರೆಯಲಿ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಸಮೀವುಲ್ಲಾ ಮಾತನಾಡಿ, ಹಣ ಕಳೆದುಕೊಂಡರೆ ಸಂಪಾದಿಸಬಹುದು. ಆದರೆ ಆರೋಗ್ಯ ಕೆಟ್ಟರೆ ಎಷ್ಟು ಹಣ ಸುರಿದರೂ ಸರಿಪಡಿಸಲು ಸಾಧ್ಯವಿಲ್ಲ. ಚಿಕಿತ್ಸೆಗೆ ಬರುವ ಜನರು ಸಮಾಧಾನದಿಂದ ವರ್ತಿಸುವ ಮೂಲಕ ಮಹತ್ವಾಕಾಂಕ್ಷಿ ಕೆಲಸಕ್ಕೆ ಬಲ ತುಂಬಬೇಕು ಎಂದು ಸಲಹೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮರಾಜು, ಪೌರಾಯುಕ್ತ ಕೃಷ್ಣ ಮೂರ್ತಿ, ತಾಪಂ ಇಒ ಸತೀಶ್, ನಗರಸಭೆ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ನಾಗರಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net