ಮನೆ ಬಾಗಿಲಿಗೆ ಬರಲಿದೆ ಸರ್ಕಾರ

ashok (FILEminimizer)
Published on

ಬೆಂಗಳೂರು: ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರವೇ ಜನರ ಮನೆ ಬಾಗಿಲಿಗೆ ಬರಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾಡಳಿತ ಮಂಗಳವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಂಗಳ ವಾರ ಆಯೋಜಿಸಿದ್ದ ಅಕ್ರಮ ಸಕ್ರಮ ಯೋಜನೆಯ 10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ತಿಂಗಳಲ್ಲಿ ಒಂದು ದಿನ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಸೇರಿ ವಿವಿಧ ಇಲಾಖೆಗಳ ಸಂಬಂಧಪಟ್ಟ ಅಧಿಕಾರಿಗಳು ಹಳ್ಳಿಗಳಿಗೆ ಬಂದು ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹರಿಸಲಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

700 ಕೋಟಿ ರೂ. ಉಳಿತಾಯ: ವೃದ್ಧಾಪ್ಯ ವೇತನ ಯೋಜನೆಯಲ್ಲಿ ನಕಲಿ ಫಲಾನುಭವಿಗಳು ಇರುವ ಬಗ್ಗೆ ದೂರುಗಳು ಕೇಳಿಬಂದಿವೆ. ಅಂಥವರನ್ನು ಪತ್ತೆ ಹಚ್ಚಲು ಆಧಾರ್ ಜೋಡಣೆಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 700 ಕೋಟಿ ರೂ. ಉಳಿತಾಯವಾಗುತ್ತದೆ. ಇನ್ನು ಮುಂದೆ ವೃದ್ಧಾಪ್ಯ ವೇತನ ಪಡೆಯಲು ಅರ್ಜಿ ಹಾಕುವಂತಿಲ್ಲ. ಆಧಾರ್​ನಲ್ಲಿರುವ ಜನ್ಮ ದಿನಾಂಕ ಆಧರಿಸಿ ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬಂದು ಮಾಹಿತಿ ಸಂಗ್ರಹಿಸಲಿದ್ದಾರೆ. ಆ ಜನ್ಮ ದಿನಾಂಕದ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಮತ್ತಷ್ಟು ಹಕ್ಕುಗಳ ಪತ್ರಗಳ ವಿತರಣೆ: ಸರ್ಕಾರಿ ಜಮೀನುಗಳಲ್ಲಿ ಮನೆ ಕಟ್ಟಿಸಿಕೊಂಡು ವಾಸವಾಗಿರುವ ಬಡವರಿಗೆ ಮುಂದಿನ ದಿನಗಳಲ್ಲಿ ಮಂಗಳೂರು, ಕಲಬುರಗಿ, ರಾಯಚೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಅಶೋಕ್ ತಿಳಿಸಿದರು.

ಅಂಗನವಾಡಿ, ಆಸ್ಪತ್ರೆ, ಸ್ಮಶಾನ ಸೇರಿ ವಿವಿಧ ಉದ್ದೇಶಕ್ಕೆ ಬಳಸಿಕೊಳ್ಳಲು 1,190 ಎಕರೆ ಗೋಮಾಳ ಜಮೀನು ನೀಡಲಾಗಿದೆ. ಅನ್​ಲೈನ್​ನಲ್ಲೇ ಭೂಪರಿವರ್ತನೆ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಸಚಿವ ವಿ. ಸೋಮಣ್ಣ, ಸಂಸದ ಪಿ.ಸಿ. ಮೋಹನ್, ಮೇಯರ್ ಗೌತಮ್ುಮಾರ್, ಶಾಸಕರಾದ ಉದಯ್ ಬಿ. ಗರುಡಚಾರ್, ಎಂ. ಕೃಷ್ಣಪ್ಪ, ಸತೀಶ್ ರೆಡ್ಡಿ, ಬೈರತಿ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ಸಮಿತಿ ರಚನೆ

ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲು ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವಶಪಡಿಸಿಕೊಂಡಿರುವ ಜಾಗಗಳಲ್ಲಿ ಬಡವರಿಗೆ ಮನೆಗಳನ್ನು ನಿರ್ವಿುಸಲಾಗುವುದು. ಸ್ಲಂ ಮುಕ್ತ ರಾಜ್ಯವನ್ನಾಗಿಸಲು ಮುಂದಿನ ದಿನಗಳಲ್ಲಿ ಸ್ಲಂಗಳಲ್ಲಿ ಮತ್ತಷ್ಟು ಮನೆ ನಿರ್ಮಾಣ ಹಾಗೂ ರಾಜ್ಯದಲ್ಲಿ ಪ್ರತಿಯೊಬ್ಬರ ಸ್ವಂತ ಸೂರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಎಲ್ಲ ಇಲಾಖೆಗಳಿಗೆ ಕಂದಾಯ ಇಲಾಖೆಯೇ ಮಾತೃ ಇಲಾಖೆ. ಸರ್ಕಾರದ ಮಹತ್ವದ ಯೋಜನೆಗಳನ್ನು ಜಾರಿಗೆ ತರುವ ಪ್ರಮುಖ ಇಲಾಖೆಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯವನ್ನು ಅಭಿವೃದ್ಧಿಗೊಳಿಸಲು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರಲಾಗುವುದು. | ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net