

ಮಡಿಕೇರಿ: ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಕೊಡಗು ಜಿಲ್ಲೆಯಲ್ಲಿ ಹುಲಿಗಳ ಉಪಟಳ ಹೆಚ್ಚಾಗುತ್ತಿದ್ದು, ಕಳೆದ ೨ ವರ್ಷಗಳಲ್ಲಿ ೬ ಮಾನವಜೀವ ಹಾನಿ ಮತ್ತು ಅನೇಕ ಜಾನುವಾರುಗಳು ಸಾವನ್ನಪ್ಪಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ ಕೊಡಗಿನ ಜನರ ಜೀವಕ್ಕೆ ಬೆಲೆ ಇಲ್ಲದಂತೆ ವರ್ತಿಸುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡಾನೆಗಳು ತೋಟಗಳನ್ನೇ ಆವಾಸ ಸ್ಥಾನ ಮಾಡಿಕೊಂಡಿದ್ದರೆ, ಹುಲಿಗಳು ಮನುಷ್ಯರನ್ನೇ ಆಹಾರ ಮಾಡಿಕೊಳ್ಳುತ್ತಿವೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದರೂ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ದುರಂತ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ಕಳೆದ ೨೫ ವರ್ಷಗಳಿಂದ ಬಿಜೆಪಿಯವರೇ ಶಾಸಕರುಗಳಾಗಿದ್ದಾರೆ. ಸಂಸದರು ಬಿಜೆಪಿಯವರೇ ಆಗಿದ್ದಾರೆ. ಆದರೆ ಕೊಡಗನ್ನು ಕಾಡುತ್ತಿರುವ ವನ್ಯಜೀವಿಗಳ ದಾಳಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರಕ್ಕೆ ಯಾರೂ ಪ್ರಯತ್ನಿಸಿಲ್ಲ ಎಂದು ಆರೋಪಿಸಿದ ಅವರು, ಆಡಳಿತ ಪಕ್ಷದಲ್ಲಿರುವವರು ವಿಧಾನಸಭೆಯಲ್ಲಿ ಹುಲಿ ಮದುವೆಗೆ ಅವಕಾಶ ಕೊಡಿ ಎಂದು ಒತ್ತಾಯ ಮಾಡುತ್ತಾರೆ. ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳಬೇಕಾದ ಜನಪ್ರತಿನಿಧಿಗಳು ಕಾನೂನನ್ನು ಕೈಗೆತ್ತಿಕೊಳ್ಳುವ ರೀತಿಯ ಪ್ರಚೋದನಾಕಾರಿ ಒತ್ತಾಯಗಳನ್ನು ಮುಂದಿಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಗಾಯಗೊಂಡ ಹುಲಿಗಳೇ ದಕ್ಷಿಣ ಕೊಡಗು ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಾಜರೋಷವಾಗಿ ಮುಖ್ಯರಸ್ತೆಗಳಲ್ಲೇ ಸಂಚರಿಸುತ್ತಿವೆ. ಪ್ರಾಣಿಗಳನ್ನು ಬೇಟೆಯಾಡಲು ಸಾಧ್ಯವಾಗದೆ ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಜಿಲ್ಲೆಯ ಹೊರ ಭಾಗದಿಂದ ಹುಲಿಗಳು ಕೊಡಗನ್ನು ಪ್ರವೇಶಿಸುತ್ತಿರುವ ಬಗ್ಗೆ ಸಂಶಯ ವ್ಯಕ್ತಪಸಿರುವ ಅವರು, ತಕ್ಷಣ ಅರಣ್ಯ ಇಲಾಖೆ ಹುಲಿದಾಳಿಯ ಕುರಿತು ಕೊಡಗಿನ ಜನರಿಗೆ ಸ್ಪಷ್ಟೀಕರಣ ನೀಡಬೇಕೆಂದು ಒತ್ತಾಯಿಸಿದರು.
ಈಗಾಗಲೇ ಇತ್ಯರ್ಥವಾಗಿರುವ ಬಾಣೆ ಜಾಗದ ವಿಚಾರದಲ್ಲಿ ಕಂದಾಯ ಸಚಿವರು ಮತ್ತೆ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಗುತ್ತಿಗೆ ಆಧಾರದಲ್ಲಿ ಬಾಣೆ ಜಾಗ ನೀಡುವುದಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ನೀಡಿದ ಹೇಳಿಕೆ ಅಧಿಕಾರಿಗಳಿಂದಾದ ತಪ್ಪಿನಿಂದಾಗಿ ಹೀಗಾಗಿದೆ ಎಂದು ಕೊಡಗಿನ ಜನಪ್ರತಿನಿಧಿಗಳು ಸ್ಪಷ್ಟೀಕರಣ ನೀಡಿದ್ದಾರೆ. ಇದು ತಮ್ಮ ಸರ್ಕಾರದ ಒಬ್ಬ ಸಚಿವರನ್ನು ಜನರ ಟೀಕೆಯಿಂದ ರಕ್ಷಣೆ ಮಾಡುವ ಯತ್ನವಾಗಿದೆಯೇ ಹೊರತು ಜನರ ಮೇಲಿನ ಪ್ರೀತಿಯಿಂದಲ್ಲ. ಕಂದಾಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಕೊಡಗಿನಲ್ಲಿ ವಿಶೇಷ ಸಭೆ ನಡೆಸಿ ಜನರ ಅಹವಾಲನ್ನು ಸ್ವೀಕರಿಸಬೇಕು ಎಂದರು.
ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಂಸದರಿಗೆ ಇಚ್ಚಾಶಕ್ತಿಯ ಕೊರತೆ ಕಾಡುತ್ತಿದೆ. ಚುನಾವಣೆಗಳಲ್ಲಿ ಗೆಲುವು ಸಾಧಿಸುವುದಷ್ಟೇ ಇವರ ಅಜೆಂಡಾವಾಗಿದ್ದು, ಕೊಡಗಿನ ಜನರ ಹಿತ ಬೇಡವಾಗಿದೆ. ಜನರು ಕೂಡ ಇವರುಗಳಿಂದ ಬೇಸತ್ತಿದ್ದು, ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಉಪಾಧ್ಯಕ್ಷ ಪ್ರಭು ರೈ, ಸಂಘಟನ ಕಾರ್ಯದರ್ಶಿ ರವಿಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಆಪ್ತ ಕಾರ್ಯದರ್ಶಿ ಬೊಳ್ಳಜೀರ ಅಯ್ಯಪ್ಪ, ಪ್ರಮುಖರಾದ ಪ್ಯಾನ್ಸಿ ಪಾರ್ವತಿ ಇದ್ದರು.