

ದೇವದುರ್ಗ: ತಾಲೂಕಿನಲ್ಲಿ ಅವೈಜ್ಞಾನಿಕ ಟೋಲ್‌ಗೇಟ್‌ಗಳನ್ನು ರದ್ದು ಮಾಡುವ ಕುರಿತು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಭೆಗೆ ಶಾಸಕಿ ಕರೆಮ್ಮ ಜಿ.ನಾಯಕ ಅವರನ್ನು ಆಹ್ವಾನಿಸಿ ಮನವಿ ಕೇಳದೆ ಕಣ್ಣೀರು ಹಾಕಿಸಿದ್ದಾರೆ. ಸರ್ಕಾರ ದಲಿತ ಶಾಸಕಿಗೆ ಅನ್ಯಾಯ ಮಾಡಿದೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಶರಣಗೌಡ ಸುಂಕೇಶ್ವರಹಾಳ ಆರೋಪಿಸಿದರು.
ಇದನ್ನೂ ಓದಿ:ನಾನು ಶಾಸಕಿಯಾಗಲು ರಿಸರ್ವೇಶನ್ ಕಾರಣ
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಮಲಾ-ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಯಲ್ಲಿ 73 ಕಿಮೀ ವ್ಯಾಪ್ತಿಯಲ್ಲಿ ಎರಡು ಟೋಲ್‌ಗೇಟ್ ಆರಂಭಿಸಲಾಗಿದೆ. 40 ಕಿಮೀ ಅಂತರದಲ್ಲಿ ಟೋಲ್‌ಗೇಟ್ ಆರಂಭಿಸಿದ್ದನ್ನು ಖಂಡಿಸಿ ಶಾಸಕಿ ಕರೆಮ್ಮ ಜಿ.ನಾಯಕ ನೇತೃತ್ವದಲ್ಲಿ ಕಾಕರಗಲ್ ಟೋಲ್ ಬಳಿ ತಾಲೂಕಿನ ಜನರು ಪ್ರತಿಭಟನೆ ನಡೆಸಿದ್ದರು. ಸರ್ಕಾರ ಟೋಲ್ ರದ್ದತಿ ಬಗ್ಗೆ ಚರ್ಚಿಸಲು ತುರ್ತುಸಭೆ ಕರೆದು ಶಾಸಕಿ ಕರೆಮ್ಮ ನಾಯಕಗೆ ಆಹ್ವಾನಿಸಿತ್ತು. ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಶರಣಪ್ರಕಾಶ ಪಾಟೀಲ್, ಎನ್.ಎಸ್.ಬೋಸರಾಜು ನೇತೃತ್ವದಲ್ಲಿ ಟೋಲ್‌ಗೇಟ್ ಕುರಿತು ಸಭೆ ಕರೆದು ಬೇರೆ ವಿಷಯ ಚರ್ಚಿಸಿದ್ದಾರೆ. ಮಹಿಳೆ ಹಾಗೂ ದಲಿತ ಶಾಸಕಿ ಕರೆಮ್ಮ ಜಿ.ನಾಯಕ ಮನವಿಗೆ ಸ್ಪಂದಿಸದೆ ಅಪಮಾನ ಮಾಡಿದ್ದಾರೆ. ಇದರಿಂದ ಕಣ್ಣೀರು ಹಾಕಿದ ಶಾಸಕಿ ಸಭೆಯಿಂದ ಹೊರ ನಡೆದಿದ್ದಾರೆ. ಕೂಡಲೇ ಸರ್ಕಾರ 2 ಟೋಲ್ ರದ್ದುಗೊಳಿಸಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಆದೇಶ ಹೊರಡಿಸಬೇಕು. ನಿರ್ಲಕ್ಷ್ಯ ಮಾಡಿದರೆ ಶಾಸಕಿ ಕರೆಮ್ಮ ನೇತೃತ್ವದಲ್ಲಿ ಸಭೆ ನಡೆಸಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಚಂದಪ್ಪ ಅಕ್ಕರಕಿ, ನಾಗರಾಜ ಪಾಟೀಲ್ ನೀಲಗಲ್, ಶಾಲಂ ಉದ್ದಾರ್, ಚನ್ನಪ್ಪ ಮಸೀದಾಪುರ, ಸಿದ್ದಣ್ಣ ಗಣೇಕಲ್, ದೊಡ್ಡ ರಂಗಣ್ಣ ಪಾಟೀಲ್, ಇಸಾಕ್ ಮೇಸ್ತ್ರಿ ಇತರರಿದ್ದರು.