

ಶಿವಮೊಗ್ಗ: ರಾಜ್ಯ ಸರ್ಕಾರ ಕೇವಲ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡಿಲ್ಲ. ಜನಸಾಮಾನ್ಯರ ಬದುಕನ್ನೂ ದುಬಾರಿ ಮಾಡಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಕಿಡಿಕಾರಿದರು.
ಸೀನಪ್ಪ ಶೆಟ್ಟಿ ವೃತ್ತದಲ್ಲಿ ಪ್ರತಿಭಟನಾಕಾರರ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಖಜಾನೆ ಖಾಲಿಯಾಗಿದ್ದು ಕಾಂಗ್ರೆಸ್ ಧೂಳೀಪಟ ಆಗುವುದು ನಿಶ್ಚಿತವಾಗುತ್ತಿದೆ. ಎಲ್ಲರ ಜೇಬಿಗೆ ಕನ್ನ ಹಾಕುತ್ತಿರುವ ಸಿದ್ದರಾಮಯ್ಯ ಸರ್ಕಾರ ಹೈನುಗಾರರಿಗೆ ನೀಡಬೇಕಿದ್ದ 900 ಕೋಟಿ ರೂ. ನೀಡದೆ ಅನ್ಯಾಯ ಮಾಡಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಿಲ್ಲ. ಆದರೆ ರಾಜ್ಯ ಸರ್ಕಾರ ಮಾತ್ರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ. ರಾಜ್ಯ ಸರ್ಕಾರಕ್ಕೆ ಎಲ್ಲ ಕಡೆಯಿಂದ ಹಣ ಬೇಕಾಗಿದೆ. ಗ್ಯಾರಂಟಿ ಕೊಟ್ಟು ಜನರಿಂದಲೇ ಮೂರು ಪಟ್ಟು ಹೆಚ್ಚು ವಸೂಲಿ ಮಾಡುತ್ತಿದೆ. ಬಡವರ ಸುಲಿಗೆ ಮಾಡುವ ಮೂಲಕ ದುಷ್ಟ ನೀತಿ ಅನುಸರಿಸುತ್ತಿದೆ. ಈ ಸರ್ಕಾರ ಬಹಳ ದಿನ ಇರುವುದಿಲ್ಲ ಎಂದರು.