

ಬೆಂಗಳೂರು: ಸರ್ಕಾರಿ ಕಾಲೇಜು, ವಿಶ್ವವಿದ್ಯಾಲಯ, ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಅನ್ವಯವಾಗುವ ವೇತನ, ನಿವೃತ್ತಿ ವೇತನ ಮತ್ತು ಇತರೆ ಪ್ರಯೋಜನ ನಿಯಂತ್ರಿಸಲು ಸರ್ಕಾರ ಪ್ರಸ್ತಾಪಿಸಿದ ವಿಧೇಯಕಕ್ಕೆ ಶಾಸನ ಸಭೆ ಅನುಮೋದನೆ ನೀಡಿದೆ. ಮಂಗಳವಾರ ವಿಧಾನಸಭೆಯಲ್ಲಿ ಈ ವಿಧೇಯಕದ ಅನಿವಾರ್ಯತೆಯನ್ನು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ವಿವರಿಸಿದರು. 2006ರ ಜ.1ಕ್ಕೂ ಮೊದಲು ನಿವೃತ್ತಿ ಹೊಂದಿರುವ ಸರ್ಕಾರಿ ಪದವಿ ಕಾಲೇಜುಗಳು ಮತ್ತು ವಿವಿಗಳ ಪ್ರಾಧ್ಯಾಪಕರಿಗೆ ಯುಜಿಸಿ ಪರಿಷ್ಕೃತ ವೇತನದ ಪಿಂಚಣಿ ಸೌಲಭ್ಯ ನೀಡುವುದಿಲ್ಲ ಎಂದು ಹಿಂದಿನ ಸರ್ಕಾರ ನಿರ್ಣಯ ಮಾಡಿತ್ತು. ಆದರೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದಾಗ ಸರ್ಕಾರಕ್ಕೆ ವ್ಯತಿರಿಕ್ತ ತೀರ್ಪು ನೀಡಿತು. ಕೋರ್ಟ್ ಆದೇಶ ಪಾಲಿಸಿದರೆ ಸರ್ಕಾರಕ್ಕೆ 800 ರಿಂದ 1,000 ಕೋಟಿ ರೂ. ಬೇಕಾಗುತ್ತದೆ. ಈ ಕಾರಣಕ್ಕೆ ಸುಗ್ರೀವಾಜ್ಞೆ ತಂದು, ಕಾನೂನು ರೂಪದಲ್ಲಿ ತರಲಾಗಿದೆ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು.