

ಶಿವಮೊಗ್ಗ: ರಾಜ್ಯ ಸರ್ಕಾರ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಿದೆ. ವಿಶೇಷ ಜಾಹೀರಾತನ್ನೂ ನೀಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆಗೆ ಸರ್ಕಾರ ಮೊದಲು ಜನರ ಕ್ಷಮೆ ಕೋರಿ ಬಳಿಕ ಜಯಂತಿ ಆಚರಿಸಬೇಕಿತ್ತು ಎಂದು ಶಾಸಕ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.
ಯಾವ ಮುಖ ಇಟ್ಟುಕೊಂಡು ಸರ್ಕಾರ ವಾಲ್ಮೀಕಿ ಜಯಂತಿ ಆಚರಿಸಿದೇ ಎಂಬುದೇ ಗೊತ್ತಿಲ್ಲ. ನಿಗಮದಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದಿದ್ದ ಸಿಎಂ, ಬಳಿಕ ಎಸ್‌ಐಟಿ ರಚನೆ ಮಾಡಿದರು. ತನಿಖೆಯಲ್ಲಿ ಅಂದಿನ ಸಚಿವ ಬಿ.ನಾಗೇಂದ್ರ ಹೆಸರನ್ನು ಕೈ ಬಿಡಲಾಯಿತು. ಇಡಿ ತನಿಖೆಯಲ್ಲಿ ನಾಗೇಂದ್ರ ಹಗರಣದ ಕಿಂಗ್‌ಪಿನ್ ಎಂದು ಉಲ್ಲೇಖಿಸಲಾಗಿದೆ. ಈ ಸರ್ಕಾರಕ್ಕೆ ವಾಲ್ಮೀಕಿ ಹೆಸರು ಹೇಳುವ ಯೋಗ್ಯತೆಯೂ ಇಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಸದನದಲ್ಲಿ ಹೇಳಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 87 ಕೋಟಿ ರೂ. ಹಗರಣ ನಡೆದಿದ್ದು ನಿಜ ಎಂದಿದ್ದರು. ಆ ಹಣ ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಬಳಕೆಯಾಗಿದೆ ಎಂಬ ಸಂಗತಿ ಇಡಿ ತನಿಖೆಯಲ್ಲಿ ಬಹಿರಂಗವಾಗಿದೆ. ಹೀಗಾಗಿ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಆತ್ಮಹತ್ಯೆ ಮಾಡಿಕೊಂಡಿದ್ದ ಚಂದ್ರಶೇಖರನ್ ಅವರ ಪತ್ನಿ ಹೇಳಿಕೆಯನ್ನು ಮೂರು ಬಾರಿ ಬದಲಾಯಿಸಲಾಗಿದೆ. ಶಿವಮೊಗ್ಗದ ಡಿವೈಎಸ್‌ಪಿ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ಬರೆದುಕೊಂಡು ಚಂದ್ರಶೇಖರನ್ ಪತ್ನಿಯ ಸಹಿ ಹಾಕಿಸಿಕೊಂಡಿದ್ದಾರೆ. ಡೆತ್‌ನೋಟ್ ಅನ್ವಯ ಎ್ಐಆರ್ ದಾಖಲಿಸಿಲ್ಲ ಎಂದು ದೂರಿದರು.
ವಾಲ್ಮೀಕಿ ಸಮುದಾಯದ ಗಂಗಾ ಕಲ್ಯಾಣ ಯೋಜನೆ, ವಿದ್ಯಾರ್ಥಿ ವೇತನ, ಭೂಮಿ ಖರೀದಿಗೆ ಸಹಾಯ ಧನವನ್ನು ಮಾರ್ಚ್ ಅಂತ್ಯದೊಳಗೆ ವಿತರಣೆ ಮಾಡಬೇಕಿತ್ತು. ಆದರೆ ನಿಗಮದ ಹಣವನ್ನೇ ದುರುಪಯೋಗ ಮಾಡಿಕೊಳ್ಳಲಾಗಿದೆ. ಇದು ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ. ಗುತ್ತಿಗೆದಾರರಿಗೆ ಬಿಲ್ ಮಂಜೂರು ಮಾಡದ ಕಾರಣ ಕೆಲ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಬಿಡುಗಡೆಯಾಗಿಲ್ಲ. ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳೂ ವಿಫಲವಾಗಿವೆ ಎಂದು ಆರೋಪಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಪ್ರಮುಖರಾದ ಎಸ್.ದತ್ತಾತ್ರಿ, ಎಸ್.ಜ್ಞಾನೇಶ್ವರ್, ಶಿವರಾಜ್, ಚಂದ್ರಶೇಖರ್, ಅಣ್ಣಪ್ಪ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.