ಯಾವುದೇ ಸಮಯದಲ್ಲಿ ಸರ್ಕಾರ ಪತನ

MP shettar
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಮಾತು ಕೊಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಳ್ಳುತ್ತಿಲ್ಲ ಎಂಬ ಅನುಮಾನ ಕಾಂಗ್ರೆಸ್ ಹೈಕಮಾಂಡ್​ಗೆ ಬಂದಿದೆ. ಹಾಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ 5 ವರ್ಷಗಳ ಅವಧಿ ಪೂರ್ಣಗೊಳಿಸುವುದಿಲ್ಲ ಎಂಬುದು ಖಚಿತ. ಯಾವುದೇ ಸಮಯದಲ್ಲಿ ಸರ್ಕಾರ ಬೀಳಬಹುದು ಎಂದು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಮಾಡಿ ತಮ್ಮ ಖುರ್ಚಿ ಗಟ್ಟಿಯಾಗಿದೆ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮೈಸೂರಿನಲ್ಲಿ ಭಾಷಣ ಮುಗಿಸಿದ ತಕ್ಷಣವೇ ಅಲ್ಲಿಂದ ಹೊರಟು ಹೋದರು. ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದರು.

ಸಿಎಂ ಆಗಲು ಶಿವಕುಮಾರ್ ದೊಡ್ಡ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಹೊರಗೆ ಹೇಳಿಕೊಳ್ಳುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಅಭದ್ರತೆ ಕಾಡುತ್ತಿದೆ. ಶಿವಕುಮಾರ್ ಅವರಿಗೆ ಅವಕಾಶದಿಂದ ವಂಚನೆ ಆಗುತ್ತಿದೆ ಎಂಬ ಹತಾಶೆ ಇದೆ. ಹೀಗೆ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯದಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಕಾನೂನು ಸುವ್ಯವಸ್ಥೆ ಹದೆಗೆಟ್ಟು ಹೋಗಿದೆ ಎಂದು ಆರೋಪಿಸಿದರು.

ಕ್ಷೇತ್ರದ ಅಭಿವೃದ್ಧಿಗೆ 50 ಕೋಟಿ ರೂ. ಸಾಲುವುದಿಲ್ಲ. ಮುಂದಿನ ತಿಂಗಳು ಅಧಿವೇಶನ ಆರಂಭವಾಗುತ್ತಿರುವುದರಿಂದ ಶಾಸಕಾಂಗ ಸಭೆಯಲ್ಲಿ ಶಾಸಕರು ಗಲಾಟೆ ಮಾಡಬಾರದು ಅನ್ನುವ ಕಾರಣಕ್ಕೆ ವಿಧಾನಸಭೆ ಕ್ಷೇತ್ರಕ್ಕೆ 50 ಕೋಟಿ ರೂ. ಅನುದಾನ ಕೊಡುವ ಭರವಸೆ ನೀಡಿದ್ದಾರೆ. ಅದು ಸಹ ಬಿಜೆಪಿ, ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ಅನುದಾನ ಕೊಡುತ್ತಿಲ್ಲ, ರಾಜ್ಯದ ಖಜಾನೆ ಖಾಲಿ ಆಗಿರುವ ಸಂಕೇತವಿದು ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net