ಸರ್ಕಾರಿ ವಸತಿಗೃಹ ಭೂತಬಂಗಲೆ!

bmr
Published on

ಬಂಡೀಮಠ ಶಿವರಾಮ ಆಚಾರ್ಯ ತಾಲೂಕು ಕೇಂದ್ರ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66 ನಗರ ನಡುವೆ 7 ಸರ್ಕಾರಿ ವಸತಿಗೃಹಗಳು ಪಾಳುಬಿದ್ದು ಭೂತ ಬಂಗ್ಲೆಯಂತಾಗಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯದ ಬಳಿ 7 ಸರ್ಕಾರಿ ವಸತಿಗೃಹಗಳಿದ್ದು ಹಿಂದೆ ಅನೇಕ ವೈದ್ಯರು ಮತ್ತು ವಿವಧ ಸರ್ಕಾರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇಲ್ಲಿ ವಾಸವಾಗಿದ್ದರು. ಇದೀಗ ಕೆಲವು ವರ್ಷದಿಂದ ಪಾಳುಬಿದ್ದಿರುವ ಈ ಕಟ್ಟಡಗಳಿಗೆ ಗಿಡಬಳ್ಳಿಗಳು ಸುತ್ತಿಕೊಂಡು ಕೇಳುವವರೇ ಇಲ್ಲದಂತಾಗಿದೆ. ಸಬ್ ರಿಜಿಸ್ಟ್ರಾರ್, ಸರ್ವೇ ಸೇರಿದಂತೆ ಹಲವಾರು ಸರ್ಕಾರಿ ಕಚೇರಿ ಹೊಂದಿರುವ ಬ್ರಹ್ಮಾವರ ತಾಲೂಕು ಆಡಳಿತ ಸೌಧಕ್ಕೆ ತಾಗಿಕೊಂಡು ಇರುವ ಒಂದು ಎಕರೆಯಷ್ಟು ಜಾಗದಲ್ಲಿ ಪಾಳುಬಿದ್ದ ವಸತಿಗೃಹಗಳು ನಿರುಪಯುಕ್ತವಾಗಿವೆ. ಈ ಕಟ್ಟಡಗಳಿಗೆ ಕಾಯಕಲ್ಪ ಒದಗಿಸಿ ಯಾವುದಾದರೂ ಇಲಾಖೆಗಳ ಕಚೇರಿ ಅಥವಾ ಹೊಸ ವಸತಿಗೃಹಗಳನ್ನು ನಿರ್ಮಾಣ ಮಾಡಬೇಕಿದೆ.

ಬ್ರಹ್ಮಾವರ ತಾಲೂಕು ಪಂಚಾಯಿತಿ ಈಗ ಹಳೆಯ ತಾಲೂಕು ಕಚೇರಿ ಬಳಿಯಲ್ಲಿರುವ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿರುವ 70 ಸೆಂಟ್ಸ್ ಜಾಗವನ್ನು ನಮ್ಮ ಕಚೇರಿಗೆ ನೀಡುವಂತೆ ಕಂದಾಯ ಇಲಾಖೆಗೆ ಮನವಿ ಮಾಡಲಾಗಿದೆ. ಮತ್ತು ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಅನುದಾನಕ್ಕೂ ಮನವಿ ಮಾಡಲಾಗಿದೆ. -ಎಚ್.ವಿ.ಇಬ್ರಾಹಿಂಪುರ ತಾ.ಪಂ. ಕಾರ್ಯನಿರ್ವಣಾಧಿಕಾರಿ, ಬ್ರಹ್ಮಾವರ ನಾವು ಚಿಕ್ಕವರಿದ್ದಾಗ ವಸತಿಗೃಹದಲ್ಲಿದ್ದ ಸಿಬ್ಬಂದಿಯ ಮಕ್ಕಳೊಂದಿಗೆ ಶಾಲೆಗೆ ಹೋಗುತ್ತಿದ್ದೆವು. ಅಲ್ಲಿ ಅವರೊಂದಿಗೆ ಆಟವಾಡುತ್ತಿದ್ದೆವು. ಆದರೆ ಇದೀಗ ಕೆಲವು ವರ್ಷದಿಂದ ಹಾಳುಬಿದ್ದು ನೋಡುವ ಸ್ಥಿತಿಯಲ್ಲಿ ಇಲ್ಲ. ಸರ್ಕಾರ ಕಾಯಕಲ್ಪ ಮಾಡಬೇಕಾಗಿದೆ. -ಅರ್ಜುನ್ ಪ್ರಭು, ಸ್ಥಳೀಯ ಸಾಮಾಜಿಕ ಕಾರ್ಯಕರ್ತರು, ಬ್ರಹ್ಮಾವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net