ಶ್ರೀ ಸಿದ್ಧರಾಮರು ಪಂಚಕ್ರಾಂತಿಗಳ ಹರಿಕಾರ

web 3
Published on

ಚಿಕ್ಕಮಗಳೂರು: ಶ್ರೀ ಶಿವಯೋಗಿ ಸಿದ್ಧರಾಮರು ಜಲ, ಅರಣ್ಯ, ಅಕ್ಷರ, ಜಾತ್ಯತೀತ ಕಲ್ಪನೆ ಮತ್ತು ಹಸಿರು ಕ್ರಾಂತಿಗಳ ಮೂಲಕ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದರು. ಅವರು ಪಂಚ ಕ್ರಾಂತಿಗಳ ಹರಿಕಾರ ಎಂದು ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವದಲ್ಲಿ ಮಾತನಾಡಿ, ಶ್ರೀ ಸಿದ್ದರಾಮೇಶ್ವರರು ಕೈಗೊಂಡಂತೆ ಐದೂ ಕ್ರಾಂತಿಗಳ ಮೂಲಕ ಸರ್ಕಾರಗಳು ಜನರ ಜೀವನ ಹಸನುಗೊಳಿಸಬೇಕು ಎಂದು ತಿಳಿಸಿದರು.

ಆರಂಭದಲ್ಲಿ ಸ್ಥಾವರ ಕಲ್ಪನೆಯಿಂದ ಗುಡಿಗಳನ್ನು ಕಟ್ಟಿ ಪೂಜೆ ಪುನಸ್ಕಾರದಲ್ಲಿ ನಿರತರಾಗಿದ್ದ ಸಿದ್ಧರಾಮರು ಅಲ್ಲಮ ಪ್ರಭುಗಳ ಭೇಟಿಯ ನಂತರ ಜಂಗಮತ್ವದ ಕಡೆ ವಾಲಿದರು. 68 ಸಾವಿರ ವಚನಗಳನ್ನು ರಚಿಸಿ ವಚನಗಳಿಗೆ ಹೊಸ ವ್ಯಾಖ್ಯಾನ ಬರೆದು ವಚನವೆಂಬುದು ಬರೀ ಮಾತಲ್ಲ. ಅದನ್ನು ಅರಿತು ಅನುಭವಿಸಿ ತಿಳಿಯಬೇಕು ಎಂದು ಸಾರಿದ್ದರು ಎಂದರು.

ತಹಸೀಲ್ದಾರ್ ನಂದಕುಮಾರ್ ಮಾತನಾಡಿ, ಶರಣರು ಜಾತಿಗಿಂತ ನೀತಿ ಮುಖ್ಯವೆಂದು ಹೇಳಿದವರು. ಇಂಥವರ ಜಯಂತಿಗಳನ್ನು ಆಚರಿಸುವ ಮೂಲಕ ಹಿರಿಯರು ಸಮಾಜದ ಸಮಾನತೆಗೆ ಶ್ರಮಿಸಿದ್ದಾರೆ ಎಂದು ಹೇಳಿದರು.

ಅಖಿಲ ಭಾರತ ಭೋವಿ ಕೌನ್ಸಿಲ್ ಸದಸ್ಯ ಚಂದ್ರಶೇಖರ್, ಸಮಾಜದ ಮುಖಂಡ ಕೊಲ್ಲಾ ಭೋವಿ, ಬಿಎಸ್​ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ.ರಮೇಶ್, ರೂಪಾ ನಾಯಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net