ಹಣ ದುರುಪಯೋಗಕ್ಕೂ ಆಡಳಿತ ಮಂಡಳಿಗೂ ಸಂಬಂಧವಿಲ್ಲ

Published on

ಸೋಮವಾರಪೇಟೆ: ಐಗೂರು ಗ್ರಾಮ ಪಂಚಾಯಿತಿಯಲ್ಲಿ ಡಾಟಾ ಎಂಟ್ರಿ ಅಪರೇಟರ್ ಹಣ ದುರಪಯೋಗಕ್ಕೂ, ಆಡಳಿತ ಮಂಡಳಿಗೂ ಯಾವುದೇ ಸಂಬಂಧವಿಲ್ಲ ಎಂದು ಆಡಳಿತ ಮಂಡಳಿ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹಣ ದುರುಯೋಗದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸೋಮವಾರಪೇಟೆ ಠಾಣೆಯಲ್ಲಿ ಈಗಾಗಲೇ ದೂರು ನೀಡಲಾಗಿದೆ. ಆದರೆ ಆಡಳಿತ ಮಂಡಳಿ ವಿರುದ್ಧ ಗ್ರಾಮಸ್ಥರ ಹೆಸರಿನಲ್ಲಿ ಕೆಲವರು ಇಲ್ಲಸಲ್ಲದ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ.ವಿನೋದ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಂಚಾಯಿತಿ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಬೇಕೆಂದು ಆಗ್ರಹಿಸಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಹೊರಗಿನವರು ಮತ್ತು ಗುತ್ತಿಗೆದಾರರು ರಾಜಕೀಯ ದ್ವೇಷದಿಂದ ಹೇಳಿಕೆ ನೀಡಿದ್ದಾರೆ. ಸೂಕ್ತ ತನಿಖೆಯ ನಂತರ ಆಡಳಿತ ಮಂಡಳಿ ತಪ್ಪೆಸಗಿರುವುದು ಸಾಬೀತಾದರೆ ಕಾನೂನು ಕ್ರಮ ಎದುರಿಸಲು ಸಿದ್ಧರಿದ್ದೇವೆ. ಆದರೆ ಸುಳ್ಳು ಆರೋಪ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.

ಸಿಬ್ಬಂದಿಗೆ ಸಂಬಳ ಬಿಡುಗಡೆಗೆ ಥಂಬ್ ಕೊಡಿ ಎಂದು ಡಾಟಾ ಎಂಟ್ರಿ ಅಪರೇಟರ್ ಸರಿತಾ ಅವರು ಮಾಜಿ ಅಧ್ಯಕ್ಷರಾದ ಪಾರ್ವತಿ ಅವರಿಗೆ ಸುಳ್ಳು ಹೇಳಿ ಅಕ್ರಮವಾಗಿ ಥಂಬ್ ಹಾಕಿಸಿಕೊಂಡು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ ದುರುಪಯೋಗದ ಎಲ್ಲ ವಿವರಗಳಿವೆ. ಹಣ ದುರಪಯೋಗ ಮಾಡಿಕೊಂಡಿರುವ ಬಗ್ಗೆ ಹಾಗೂ ಪೂರ್ಣ ಹಣವನ್ನು ಭರಿಸುವ ಬಗ್ಗೆ ಸಿಬ್ಬಂದಿ ಸರಿತಾ ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಪೊಲೀಸರು ತನಿಖೆಯನ್ನು ವಿಳಂಬ ಮಾಡಬಾರದು ಎಂದು ಒತ್ತಾಯಿಸಿದರು.

ಪಂಚಾಯಿತಿ ಉಪಾಧ್ಯಕ್ಷೆ ಸಿ.ಎಂ.ಗೌರಮ್ಮ, ಸದಸ್ಯರಾದ ಎಲ್.ಎಂ.ರಾಜೇಶ್, ಬಿ.ಎಸ್.ಪ್ರಮೋದ್ ಮತ್ತು ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net