

ಮೈಸೂರು: ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕರ್ನಾಟಕ ಸೇನಾ ಪಡೆಯಿಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನ ಆಚರಿಸಲಾಯಿತು.
ನಗರ ಪೊಲೀಸ್ ಉಪ ಆಯುಕ್ತ ಡಾ.ಎ.ಎನ್.ಪ್ರಕಾಶ್‌ಗೌಡ ಅವರು, ನಾಲ್ವಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಅವರ ಆಡಳಿತ ಸುವರ್ಣ ಕಾಲವಾಗಿದ್ದು, ಕೈಗಾರಿಕೆ, ಕೃಷಿ, ನೀರಾವರಿ, ಕಲೆ, ಸಂಸ್ಕೃತಿ, ಸಂಗೀತ ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಕಂಡಿತ್ತು. ಮುಖ್ಯವಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಹಿಂದುಳಿದ ವರ್ಗದವರಿಗೆ, ಹೆಣ್ಣು ಮಕ್ಕಳು, ದಲಿತರಿಗೆ ಶಿಕ್ಷಣ ನೀಡಿದ್ದಲ್ಲದೇ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದರು. ಏಷ್ಯಾದಲ್ಲಿಯೇ ಪ್ರಥಮವಾಗಿ ಶಿವನಸಮುದ್ರ ವಿದ್ಯುತ್ ಸ್ಥಾವರ ಸ್ಥಾಪಿಸಿದರು. ತಮ್ಮ ಅರಮನೆಯಲ್ಲಿರುವ ಒಡವೆಯನ್ನು ಮಾರಿ ಕೃಷ್ಣರಾಜಸಾಗರ ಅಣೆಕಟ್ಟೆ ಕಟ್ಟಿಸಿ ಜನತೆಯ ನೀರಿನ ಬವಣೆ ನೀಗಿಸಿದರು ಎಂದರು.
ಇದೇ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿ ಪ್ರಥಮವಾಗಿ ತಯಾರಾಗಿದ್ದ ಸಿಹಿ ತಿಂಡಿಯಾದ ಮೈಸೂರು ಪಾಕ್ ಅನ್ನು ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ವಿತರಿಸಲಾಯಿತು.
ಕರ್ನಾಟಕ ಸೇನಾಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ ಮಾತನಾಡಿ, ಸ್ವಾತಂತ್ರೃ ಪೂರ್ವದಲ್ಲಿಯೇ ನಾಲ್ವಡಿಯವರು ಪ್ರಜಾತಂತ್ರ ವ್ಯವಸ್ಥೆಗೆ ಒತ್ತುಕೊಟ್ಟು ಪ್ರಜಾಪ್ರತಿನಿಧಿ ವ್ಯವಸ್ಥೆ ಜಾರಿಗೆ ತಂದರು. ರಾಜ್ಯದಲ್ಲಿ ಪ್ರಥಮವಾಗಿ ಮೀಸಲಾತಿ, ಹಿಂದುಳಿದವರು, ದಲಿತರಿಗೆ ಮತದಾನದ ಹಕ್ಕನ್ನು ನೀಡಿದರು. ಜನಹಿತಕ್ಕಾಗಿ ದುಡಿದ ನಾಲ್ವಡಿ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಮುಖಂಡರಾದ ಎಂ.ಎನ್.ದೊರೆಸ್ವಾಮಿ, ಡಾ. ಶಾಂತರಾಜೇಅರಸ್, ವಿಕ್ರಮ್, ಬಸಪ್ಪ, ಕುಮಾರ್‌ಗೌಡ, ಪ್ರಭುಶಂಕರ್, ಎಂ.ಬಿ.ವಿಜಯೇಂದ್ರ, ಪರಿಸರ ಚಂದ್ರು, ರಾಕೇಶ್, ದರ್ಶನ್‌ಗೌಡ, ಜ್ಯೋತಿ, ಇಂದಿರಾ ಇತರರು ಇದ್ದರು.