ಮಧುಗಿರಿ: ಪಟ್ಟಣದಲ್ಲಿ ಶನಿವಾರ ಅಪರಿಚಿತನೊಬ್ಬ ಮಹಿಳೆಯ ಗಮನ ಬೇರೆಡೆ ಸೆಳೆದು ಮೈಮೇಲಿದ್ದ 70 ಗ್ರಾಂ ಚಿನ್ನದ ಸರ ಕಳವು ಮಾಡಿದ್ದಾನೆ. ಪಟ್ಟಣದ ವಾಸವಿ ಎಲೆಕ್ಟ್ರಿಕಲ್ ಮತ್ತು ಹಾರ್ಡ್ವೇರ್ ಅಂಗಡಿಯ ಮಾಲೀಕ ವೆಂಕಟಾಚಲಪತಿ ಅವರ ಪತ್ನಿ ಸುಧಾವಾಣಿ ಅವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಅಪರಿಚಿತನೊಬ್ಬ ಬಂದು ಮಾತನಾಡಿಸಿ, ಈ ರೀತಿ ಚಿನ್ನದ ಸರ ಹಾಕಿಕೊಂಡು ಹೋಗಬೇಡಿ. ಕಳ್ಳರ ಕಾಟ ಹೆಚ್ಚಾಗಿದೆ. ನಾನು ಪೊಲೀಸ್ ಸಿಬ್ಬಂದಿ ಎಂದು ಹೇಳಿ ಚಿನ್ನದ ಸರ ಬಿಚ್ಚಿಸಿ ಬ್ಯಾಗೊಂದರಲ್ಲಿ ಪ್ಯಾಕ್ ಮಾಡಿ ಕೊಟ್ಟಿದ್ದಾನೆ. ಮನೆಗೆ ಬಂದು ಬ್ಯಾಗ್ ನೋಡಿದಾಗ ಸುಧಾವಾಣಿಗೆ ಮೋಸ ಹೋಗಿರುವುದು ತಿಳಿದುಬಂದಿದೆ. ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.