

ನರೇಗಲ್ಲ: ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದೇ ವೀರಶೈವ ಧರ್ಮದ ಮೂಲ ಗುರಿಯಾಗಿದೆ. ಅದಕ್ಕೆಂದೆ ಶ್ರೀ ಹಾನಗಲ್ಲ ಗುರು ಕುಮಾರೇಶ್ವರರು ನಮ್ಮ ಧರ್ಮವನ್ನು ಒಂದುಗೂಡಿಸಿ ಇದನ್ನು ವೀರಶೈವ ಲಿಂಗಾಯತ ಧರ್ಮ ಎಂದು ಕರೆದರು. ಆದರೆ, ಈಗೀಗ ನಮ್ಮ ಸಮಾಜ ಒಳಪಂಗಡಗಳ ಸುಳಿಗೆ ಸಿಕ್ಕು ನಲುಗುತ್ತಿದೆ ಎಂದು ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಪಟ್ಟಣದ ಹಿರೇಮಠದ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಹಾನಗಲ್ಲ ಗುರು ಕುಮಾರೇಶ್ವರ ಪುರಾಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಒಳ ಪಂಗಡಗಳಲ್ಲಿ ನೀವು ಯಾರೇ ಆಗಿರಿ, ಆದರೆ, ಯಾರಾದರೂ ನಿಮ್ಮನ್ನು ನೀವು ಯಾರು? ಎಂದು ಕೇಳಿದರೆ ಮೊದಲು ನಾವು ವೀರಶೈವರು ಎಂದು ಹೇಳಿ ನಂತರ ನಿಮ್ಮ ಒಳಪಂಗಡವನ್ನು ಹೇಳಿ. ಇದರಿಂದ ವೀರಶೈವ ಧರ್ಮ ಜಾಗೃತಿಯ ಕನಸು ನನಸಾಗುತ್ತದೆ. ಹಾನಗಲ್ಲ ಗುರು ಕುಮಾರೇಶ್ವರರು ಬಯಸಿದ ಕನಸು ನನಸಾಗುತ್ತದೆ. ಶ್ರೀ ಕುಮಾರೇಶ್ವರರ ಕನಸಿನ ಸಮಾಜವನ್ನು ಕಟ್ಟುವಲ್ಲಿ ನಾವುಗಳು ಬಹಳಷ್ಟು ಶ್ರಮಿಸಬೇಕಿದೆ. ಇಲ್ಲವಾದರೆ ನಾವು ಅವರ ಕನಸಿಗೆ ಕೊಳ್ಳಿ ಇಟ್ಟಂತಾಗುತ್ತದೆ. ಇದನ್ನು ವೀರಶೈವ ಧರ್ಮದ ಎಲ್ಲ ಒಳ ಪಂಗಡದವರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಪುರಾಣಿಕರಾದ ಪಂ. ಅನ್ನದಾನ ಶಾಸ್ತ್ರಿಗಳು ಮಾತನಾಡಿ, ಭಗವಂತನ ಸಂಕೀರ್ತನೆಯಿಂದ ಮನ ಶುದ್ಧಿಯಾಗುತ್ತದೆ. ನಾಮ ಸ್ಮರಣೆಯಲ್ಲಿರುವ ಶಕ್ತಿ ಬೇರೆ ಯಾವುದರಲ್ಲಿಯೂ ಇಲ್ಲ. ನಮ್ಮೆದುರಿಗೆ ಭಗವಂತ ಬರುವುದಿಲ್ಲ. ಆತ ಗುರುವಿನ ರೂಪದಲ್ಲಿ ಬರುತ್ತಾನೆ. ಆದ್ದರಿಂದ ಗುರುವಿನ ನುಡಿ ಆಲಿಸಬೇಕು ಮತ್ತು ಪಾಲಿಸಬೇಕು. ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದರು. </p><p>ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಎಫ್.ಎನ್. ಹುಡೇದ, ಬಿ.ಡಿ. ಯರಗೊಪ್ಪ, ಟಿ.ಬಿ. ಆಡೂರ, ಛಾಯಾಶ್ರೀ ಪ್ರಶಸ್ತಿ ಪುರಸ್ಕೃತ ಮಲ್ಲಯ್ಯ ಗುಂಡಗೋಪುರಮಠ, ವರ್ತಕ ಬಸವರಾಜ ಪುರ್ತಗೇರಿ, ಚನ್ನಬಸಪ್ಪ ಗೋದಿ, ಮಲ್ಲಪ್ಪ ಕಿತ್ತೂರ, ಚಂದ್ರಶೇಖರಯ್ಯ ಭೂಸನೂರಮಠ, ಇತರರಿದ್ದರು. ಶಿವಯೋಗಿ ಜಕ್ಕಲಿ ಕಾರ್ಯಕ್ರಮ ನಿರ್ವಹಿಸಿದರು.
ಕುಮಾರೇಶ್ವರ ಪುರಾಣ ಮಂಗಲ ನಾಳೆ: ನರೇಗಲ್ಲ ಪಟ್ಟಣದ ಹಿರೇಮಠ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಹಾನಗಲ್ಲ ಗುರು ಕುಮಾರೇಶ್ವರ ಪುರಾಣ ಮಂಗಲ, ಸದ್ಧರ್ಮಧಾಮದ ಉದ್ಘಾಟನೆ ಹಾಗೂ ಶಾಸಕ ಜಿ.ಎಸ್. ಪಾಟೀಲ ದಂಪತಿ ವಿವಾಹ ಸುವರ್ಣ ಸಂಭ್ರಮ ಸಮಾರಂಭವು ನ. 24 ರಂದು ಸಂಜೆ 6 ಗಂಟೆಗೆ ಜರುಗಲಿದೆ. ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಅಬ್ಬಿಗೇರಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು. ಇಲಕಲ್ಲ ಅನ್ನದಾನ ಶಾಸ್ತ್ರಿಗಳು ಪ್ರವಚನ ಮಂಗಲನುಡಿಯನ್ನಾಡುವರು. ಶಾಸಕ ಜಿ.ಎಸ್. ಪಾಟೀಲ ದಂಪತಿಗೆ ಗೌರವ ಸಮರ್ಪಣೆ ಜರುಗಲಿದೆ. ಡಾ. ಕೆ.ಬಿ. ಧನ್ನೂರ, ಎಂ.ಎಸ್. ಧಡೇಸೂರಮಠ, ಬಸವರಾಜ ಕಳಕೊಣ್ಣವರ, ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ಇತರರು ಪಾಲ್ಗೊಳ್ಳಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.