

ಸಿದ್ದಾಪುರ: ಸಮಾಜ ವ್ಯವಸ್ಥೆ ಹೇಗೆ ಇದ್ದರೂ ಅದನ್ನು ಮೀರಿ ಮುಂದಿನ ಸಮಾಜಕ್ಕೆ ಉತ್ತಮ ಮತ್ತು ಅಗತ್ಯವಾದ ಶಿಕ್ಷಣವನ್ನು ನೀಡುವದು ಶಿಕ್ಷಕ ವೃಂದದ ಗುರಿಯಾಗಬೇಕು. ಶಿಕ್ಷಕ ಅಥವಾ ಶಿಕ್ಷಕಿ ಓರ್ವ ವ್ಯಕ್ತಿಯಾಗಿ ವ್ಯವಸ್ಥೆಗಿಂತ ಮುಂದೆ ಹೋಗಿ ಹೃದಯವಂತ ಶಿಕ್ಷಕರಾದಾಗ ಸಮಾಜ ಉತ್ತಮವಾಗುತ್ತದೆ ಎಂದು ವಿದ್ಯಾಪೋಷಕ ಸಂಸ್ಥೆ ಅಧ್ಯಕ್ಷ ಆರ್.ಎನ್.ತಿಕೋಟಾ ಹೇಳಿದರು.
ಸ್ಥಳಿಯ ಶಂಕರಮಠದ ಸಭಾಂಗಣದಲ್ಲಿ ಶೃಂಗೇರಿ ಶಂಕರಮಠ ಮತ್ತು ಧಾರವಾಡದ ವಿದ್ಯಾಪೋಷಕದ ಸಹಯೋಗ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಕಾರದಲ್ಲಿ, ಸುವರ್ಣಭಾರತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಬೋಧಕ- ಬೋಧಿನಿ ಎನ್ನುವ ತಾಲೂಕಿನ ಪ್ರಾಥಮಿಕ ಶಾಲೆಗಳ ಎಲ್ಲ ಶಿಕ್ಷಕರ ಎರಡು ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬಿಇಒ ಎಂ.ಎಚ್.ನಾಯ್ಕ ಮಾತನಾಡಿ ಪ್ರತಿ ವ್ಯಕ್ತಿಯೂ ಸಮಾಜಮುಖಿಯಾದ ತನ್ನ ಅನಿಸಿಕೆಗಳನ್ನು ಬಹುಮುಖ್ಯವಾದ ಕೊಡುಗೆಯಾಗಿ ನೀಡುವದು ಅತ್ಯಂತ ಮುಖ್ಯವಾದದ್ದು. ಆ ನಿಟ್ಟಿನಲ್ಲಿ ವಿದ್ಯಾಪೋಷಕ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಕರು ನಿರಂತರ ವಿದ್ಯಾರ್ಥಿಯಾಗಿದ್ದು ಬೇರೆಡೆಯಿಂದ ದೊರಕುವ ಅಮೂಲ್ಯ ಜ್ಞಾನವನ್ನು ಪಡೆದುಕೊಂಡು, ಮುಂದಿನ ಪೀಳಿಗೆಗೆ ನೀಡುವಲ್ಲಿ ಕ್ರೀಯಾಶೀಲರಾಗಬೇಕು ಎಂದರು.
ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ತಮ್ಮಣ್ಣ ಬೀಗಾರ ಮಾತನಾಡಿ ಸಮಾಜದ ಜವಾಬ್ದಾರಿಯುತ ವ್ಯಕ್ತಿತ್ವಗಳ ನಿರ್ವಣವೇ ಶಿಕ್ಷಕರ ಗುರಿ. ಯಾವುದೇ ಪೂರ್ವಾಗ್ರಹವಿಲ್ಲದೇ ಎಲ್ಲರನ್ನೂ ಪ್ರೀತಿಸುವ, ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಸಂವಹನ, ಅಧ್ಯಯನ ಶಿಕ್ಷಕರಿಗೆ ಅಗತ್ಯ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಉಪಸ್ಥಿತರಿದ್ದರು.
ಸಿದ್ದಾಪುರ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಎಂ.ಆರ್.ಭಟ್ಟ ನಿರ್ವಹಿಸಿದರು.
ನಂತರ ಶಿಕ್ಷಕರಿಗಾಗಿ ಅಗತ್ಯವಿರುವ ಸಂವಹನ ಕೌಶಲಗಳು ಎನ್ನುವ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ಮಾಶಾಳ ಧಾರವಾಡ, ಸುರೇಶ ಕುಲಕರ್ಣಿ ಧಾರವಾಡ, ಡಾ. ರವೀಂದ್ರ ಬೆಳಗಾವಿ ಅವರು ಕಾರ್ಯಾಗಾರ ನಡೆಸಿಕೊಟ್ಟರು.