ಪ್ರತಿ ಹೆಜ್ಜೆಯಲ್ಲೂ ಮೀಸಲಾತಿ ಪಡೆಯುವ ಲಕ್ಷ್ಯ

Swamiji
Published on

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಆಗ್ರಹಿಸಿ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಜ.14ರಂದು ಆರಂಭವಾಗಿರುವ ಪಂಚಮಸಾಲಿ ಪಂಚಲಕ್ಷ ಹೆಜ್ಜೆ ಪಾದಯಾತ್ರೆ 31 ದಿನಗಳನ್ನು ಪೂರ್ಣಗೊಳಿಸಿದೆ. ಈವರೆಗೆ 602 ಕಿ.ಮೀ. ಕ್ರಮಿಸಿರುವ ಶ್ರೀಗಳ ಏಕೈಕ ಸಂಕಲ್ಪ ಸಮುದಾಯಕ್ಕೆ ಶಿಕ್ಷಣ, ಉದ್ಯೋಗ ಮೀಸಲಾತಿ ಕಲ್ಪಿಸುವುದು. ಫೆ.21ರಂದು ಬೆಂಗಳೂರಲ್ಲಿ ಪಂಚಮಸಾಲಿ ಮಹಾರ್ಯಾಲಿ ಆಯೋಜಿಸುವ ಲಕ್ಷ್ಯೊಂದಿಗೆ ಹೆಜ್ಜೆಯಿಟ್ಟಿರುವ ಸ್ವಾಮೀಜಿ, ವಿಜಯವಾಣಿ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

# ಪಂಚಲಕ್ಷ ಹೆಜ್ಜೆಯ ಮುಂದಿನ ಲಕ್ಷ್ಯ

ಪಂಚಮಸಾಲಿ ಸಮುದಾಯಕ್ಕೆ ಶಿಕ್ಷಣ, ಉದ್ಯೋಗ ಮೀಸಲಾತಿ ಪಡೆಯಲೇಬೇಕೆ ನ್ನುವುದೇ ನಮ್ಮ ಮುಂದಿನ ಲಕ್ಷ್ಯ ರಾಜಕೀಯ ಮೀಸಲಾತಿಗೆ ಈ ಹೋರಾಟ ನಡೆಸುತ್ತಿಲ್ಲ. ಮುಂದೆ ನಾವಿಡುವ ಪ್ರತಿ ಹೆಜ್ಜೆ ಕೂಡ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಸದೃಢ ಹೆಜ್ಜೆ ಆಗಿರಲಿದೆ.

# ನಿಮ್ಮ ಹೋರಾಟಕ್ಕೆ ಸರ್ಕಾರದ ಸ್ಪಂದನೆ?

ಇದೊಂದು ಐತಿಹಾಸಿಕ ಪಾದಯಾತ್ರೆ. ಈ ಪಾದಯಾತ್ರೆ ಮೂಲಕ ರಾಜ್ಯದಲ್ಲಿ ಹೊಸ ಮನ್ವಂತರ ಸೃಷ್ಟಿ ಮಾಡಿದ್ದೇವೆ. ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಪಾದಯಾತ್ರೆ ಇತಿಹಾಸದಲ್ಲೇ ಮೊದಲೆನಿಸಿದೆ. ಹಾಗಾಗಿ ಜನರು ಹೋರಾಟಕ್ಕೆ ಅಭೂತಪೂರ್ವವಾಗಿ ಸ್ಪಂದಿಸುತ್ತಿದ್ದಾರೆ. ಸರ್ಕಾರದ ನಿಧಾನಗತಿ ಧೋರಣೆಗೆ ಹೋರಾಟವನ್ನು ತೀವ್ರಗೊಳಿಸುವ ಮೂಲಕ ಉತ್ತರ ನೀಡುತ್ತೇವೆ. ಒಳ್ಳೆಯ ಉದ್ದೇಶ ಇಟ್ಟಕೊಂಡು ನಾವಿಟ್ಟಿರುವ ಹೆಜ್ಜೆಗೆ ಸಫಲತೆ ಪಡೆದುಕೊಳ್ಳಲಿದ್ದೇವೆ.

# 2ಎ ಮೀಸಲಾತಿ ಕುರಿತು ವರದಿ ನೀಡಲು ಸಿಎಂ ಯಡಿಯೂರಪ್ಪ ರಾಜ್ಯ ಶಾಶ್ವತ ಹಿಂದುಳಿದ ವರ್ಗದ ಆಯೋಗಕ್ಕೆ ಈಗಾಗಲೆ ಆದೇಶಿಸಿದ್ದಾರಲ್ಲ...

ರಾಜ್ಯ ಹಿಂದುಳಿದ ವರ್ಗದ ಆಯೋಗಕ್ಕೆ ವರದಿ ನೀಡುವಂತೆ ಸರ್ಕಾರ ಈವರೆಗೆ ಯಾವುದೇ ಆದೇಶ ಪತ್ರ ನೀಡಿಲ್ಲ. ಈ ಬಗ್ಗೆ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸಂರ್ಪಸಿದ್ದು, ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂಬುದು ತಿಳಿಯಿತು. ಸರ್ಕಾರದ ಈ ನಿಧಾನ ಧೋರಣೆ ಸರಿಯಲ್ಲ. ಸಮುದಾಯದ ಸಚಿವರಿಬ್ಬರ ಗಮನಕ್ಕೂ ತರಲಾಗಿದೆ. ಪಾದಯಾತ್ರೆ ಬೆಂಗಳೂರು ತಲುಪುವ ವೇಳೆಗೆ ಮೀಸಲು ಕುರಿತು ಸ್ಪಷ್ಟತೆ ಸಿಗಲಿದೆ.

# ಸ್ಥಳದ ಗೊಂದಲ ಬಗೆಹರಿದಿದ್ದು ಮುಂದೆ ನಿಮ್ಮ ಯೋಜನೆ?

ಫೆ.21ರ ‘ಪಂಚಮಸಾಲಿ ಮಹಾರ್ಯಾಲಿ’ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದು, ಸಮಾವೇಶಕ್ಕೆ ಮನೆಗೊಬ್ಬ ಪಂಚಮಸಾಲಿಯಂತೆ ಮಹಾಶಕ್ತಿಯಾಗಿ ಪಾಲ್ಗೊಳ್ಳಲು ಕರೆ ನೀಡಿದ್ದೇವೆ. 10 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಅಂದು ಸಂಜೆಯೊಳಗೆ ಸಿಎಂ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ, ವಿಧಾನಸೌಧಕ್ಕೆ ತೆರಳಿ ಮಾರ್ಚ್ 4ರವರೆಗೆ ಸತ್ಯಾಗ್ರಹ ನಡೆಸಲಾಗುವುದು. ಮಾರ್ಚ್ 5ರ ನಂತರ ಆಮರಣಾಂತ ಉಪವಾಸ ಹಮ್ಮಿಕೊಳ್ಳಲಾಗುವುದು.

# ಪಾದಯಾತ್ರೆ ಪಂಚಮಸಾಲಿ ಸಮುದಾಯದಲ್ಲಿ ಒಗ್ಗಟ್ಟು ಮೂಡಿಸಿದೆಯೇ?

ಪಾದಯಾತ್ರೆ ಆರಂಭಕ್ಕೆ ಮುನ್ನ ಅನೇಕ ಭೇದಗಳಿದ್ದವು. ವ್ಯಕ್ತಿಗಳ ಪ್ರತಿಷ್ಠೆ ಭೇದವಿತ್ತು. ಪದಾಧಿಕಾರಿಗಳು, ಮಠಗಳ ನಡುವೆ ಭೇದವಿತ್ತು. ನಾವು ನಿಸ್ವಾರ್ಥ, ನ್ಯಾಯಯುತವಾಗಿ ಪಾದಯಾತ್ರೆ ಮಾಡಿದ ಪರಿಣಾಮ ಪ್ರತಿಷ್ಠೆ ಬಗ್ಗುಬಡಿಯಿತು. ಪಾದಯಾತ್ರೆಯಲ್ಲಿ ಹರಿಸಿದ ಬೆವರಹನಿಯು ಸಹ ಪರಿವರ್ತನೆ ಮಾಡಿತು. ಎಲ್ಲ ಮಾರ್ಗಗಳು ನಮ್ಮನ್ನು ಒಂದೇ ಮಾರ್ಗಕ್ಕೆ ತೆಗೆದುಕೊಂಡು ಹೋಗುತ್ತಿದೆ, ಇದು ಒಳ್ಳೆಯ ಬೆಳವಣಿಗೆ.

# ನಿಮ್ಮ ಪಾದಯಾತ್ರೆಯನ್ನು ಹೈಜಾಕ್ ಮಾಡುವ ಪ್ರಯತ್ನ ನಡೆದಿದೆಯಾ?

ಅನೇಕ ಸಂದರ್ಭದಲ್ಲಿ ಪಾದಯಾತ್ರೆಯನ್ನು ಹೈಜಾಕ್ ಮಾಡುವ ಪ್ರಯತ್ನವನ್ನು ಕೆಲವು ಮಠಾಧೀಶರು ಮಾಡಿದ್ದಾರೆ. ಆದರೆ ಜನರಿಗೆ ಸತ್ಯ ಗೊತ್ತಿದೆ. ಈ ಪಾದಯಾತ್ರೆ ಬಗ್ಗೆ ಗೊಂದಲದ ಹೇಳಿಕೆಗಳನ್ನು ರಾಜಕೀಯ ಮುಖಂಡರು ಕೊಡಿಸುತ್ತಿದ್ದಾರೆ. ಜನ ಯಾವುದಕ್ಕೂ ಮರುಳಾಗದೆ ಸತ್ಯದ ಪರವಾಗಿ ನಿಲ್ಲುತ್ತಾರೆ.

# ಪಂಚಮಸಾಲಿ ಮಹಾರ್ಯಾಲಿ ಮುಖ್ಯ ಸಂದೇಶ?

ಪಂಚಮಸಾಲಿ ಮಹಾರ್ಯಾಲಿ ನಮ್ಮ ಜನಪ್ರತಿನಿಧಿಗಳ, ಸಮಾಜದ ಐಕ್ಯತೆಯ ರ‍್ಯಾಲಿ ಯಾಗಲಿದೆ. 2ಎ ಮೀಸಲಾತಿಗೆ ಗಟ್ಟಿಯಾದ ಹಕ್ಕೋತ್ತಾಯ ಮಾಡಲಿದ್ದೇವೆ. ಕೇಂದ್ರ ಸರ್ಕಾರಕ್ಕೂ ನಮ್ಮ ಸಮಾಜದ ಒಗ್ಗಟ್ಟಿನ ಮೂಲಕ ಸ್ಪಷ್ಟ ಸಂದೇಶ ನೀಡಲಿದ್ದೇವೆ.

# ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಒಳಪಂಗಡಗಳ ಸಭೆ ಬಗ್ಗೆ ನಿಮ್ಮ ಅಭಿಪ್ರಾಯ.

ಇದು ಒಳ್ಳೆಯ ಬೆಳವಣಿಗೆ. ವೀರಶೈವ ಲಿಂಗಾಯತ ಒಳಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಮೊದಲು ನಾವೇ ಧ್ವನಿ ಎತ್ತಿದ್ದು. ಬೆಂಗಳೂರಿನ ಸಭೆಯಲ್ಲಿ ಭಾಗವಹಿಸಿರುವ ಸ್ವಾಮೀಜಿಗಳು ನಮ್ಮ ಪಂಚಮ ಸಾಲಿ ಪಾದಯಾತ್ರೆಗೆ ಬೆಂಬಲ ನೀಡುತ್ತಿರುವುದು ಸಂತೋಷ ವಾಗಿದೆ. ಎಲ್ಲರೂ ಕೂಡಿ ಲಿಂಗಾಯತರಿಗೆ ಮೀಸಲು ಪಡೆದು ಕೊಳ್ಳಲು ಪ್ರಯತ್ನ ಪಡೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net