ಉತ್ತಮ ಶಿಕ್ಷಣ ನೀಡುವುದೇ ಅದಮಾರು ಮಠದ ಗುರಿ

17bhr 2
ಬಾಳೆಹೊನ್ನೂರು ಸಮೀಪದ ಸಂಗಮೇಶ್ವರಪೇಟೆಯಲ್ಲಿ ಆರಂಭವಾಗಿರುವ ಪೂರ್ಣಪ್ರಜ್ಞಾ ಪದವಿ ಪೂರ್ವ ಕಾಲೇಜು ಹಾಗೂ ಕಟ್ಟಡದ ಉದ್ಘಾಟನೆಯನ್ನು ಉಡುಪಿ ಅದಮಾರು ಮಠ ಎಜುಕೇಷನ್ ಕೌನ್ಸಿಲ್ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ನೆರವೇರಿಸಿದರು. ಟಿ.ಡಿ.ರಾಜೇಗೌಡ, ಎಸ್.ವಿ.ಮಂಜುನಾಥ್, ವಿವೇಕ್ ಕಟೀಲ್, ಎ.ಪಿ.ಭಟ್, ಗೋಪಾಲ ಶಬರಾಯ ಇದ್ದರು.
Published on

ಬಾಳೆಹೊನ್ನೂರು: ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಲು ಗುಣಮಟ್ಟದ ಶಿಕ್ಷಣ ನೀಡುವುದೇ ಅದಮಾರು ಮಠದ ಗುರಿಯಾಗಿದೆ ಎಂದು ಉಡುಪಿ ಅದಮಾರು ಮಠ ಎಜುಕೇಷನ್ ಕೌನ್ಸಿಲ್ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿ ಶ್ರೀ ಅದಮಾರು ಮಠ ಎಜುಕೇಷನ್ ಕೌನ್ಸಿಲ್‌ನಿಂದ ಸಂಗಮೇಶ್ವರ ಪೇಟೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಪೂರ್ಣ ಪ್ರಜ್ಞಾ ಪದವಿ ಪೂರ್ವ ಕಾಲೇಜು ಹಾಗೂ ಕಟ್ಟಡದ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕಿರಿಯ ವಯಸ್ಸಿನಲ್ಲಿಯೇ ಸುಸಂಸ್ಕೃತರನ್ನಾಗಿಸಿದರೆ ಉತ್ತಮ ಪ್ರಜೆಯಾಗಲು ಸಾಧ್ಯವಿದೆ. ಸಾಮೂಹಿಕ ಪ್ರಯತ್ನದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಲು ಸಾಧ್ಯ. ಧರ್ಮ, ಅರ್ಥ, ಕಾಮ ಈ ಎಲ್ಲ ಕ್ರಿಯೆಗಳನ್ನು ಒಗ್ಗೂಡಿಸಿ ಕಾರ್ಯನಿರ್ವಹಿಸಿದರೆ ವಿದ್ಯಾರ್ಥಿಗಳಿಗೆ ಇಂದಿನ ಅವಶ್ಯಕತೆ ತಿಳಿಸಲು ಸಾಧ್ಯ ಎಂದರು.
ಜೀವನದಲ್ಲಿ ದೃಢವಾದ ನಿರ್ಧಾರ ಇದ್ದರೆ ಮಾತ್ರ ಸಾಧನೆ ಮಾಡಿ ಗುರಿ ತಲುಪಲು ಸಾಧ್ಯ. ಪೂರ್ಣ ಪ್ರಜ್ಞಾ ವಿದ್ಯಾಲಯ ದೇಶದ ಸಾಂಸ್ಕೃತಿಕ ಕಲೆ, ಮಾನವೀಯ ಗುಣಗಳನ್ನು ಮಕ್ಕಳಿಗೆ ಕಲಿಸುವ ಚಿಂತನೆ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಸಿಬಿಎಸ್‌ಇ ಶಿಕ್ಷಣ ಪದ್ಧತಿಯನ್ನು ಸಹ ಆರಂಭಿಸಲಾಗುವುದು. ಪೂರ್ಣ ಪ್ರಜ್ಞಾ ವಿದ್ಯಾಲಯ ಒಂದು ಉತ್ತಮ ಸಂಪತ್ತಾಗಿದ್ದು, ಈ ಸಂಪತ್ತನ್ನು ಸದೃಢಗೊಳಿಸಿ ಭಾರತವನ್ನು ಅಭಿವೃದ್ಧಿಗೊಳಿಸುವುದು ನಮ್ಮ ಉದ್ದೇಶ ಎಂದರು.
ಕೆಆರ್‌ಇಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ಮಾತನಾಡಿ, ದಾನಗಳಲ್ಲಿ ಶ್ರೇಷ್ಠದಾನ ವಿದ್ಯಾದಾನ. ಗ್ರಾಮೀಣ ಭಾಗದಲ್ಲಿ 40 ವರ್ಷಗಳ ಹಿಂದೆ ಉತ್ತಮ ವಿದ್ಯಾಸಂಸ್ಥೆ ಆರಂಭಿಸಿದ ಅದಮಾರು ಮಠದ ವಿಬುದೇಶ ತೀರ್ಥರ ಶ್ರಮ ಶ್ಲಾಘನೀಯ. ನಗರ ಪ್ರದೇಶಗಳಲ್ಲಿ ಇಂದು ಉದ್ಯಮಿಗಳು ಅನೇಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಶಿಕ್ಷಣವನ್ನು ಉದ್ಯಮವಾಗಿರಿಸಿಕೊಂಡಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಉತ್ತಮ ಪರಿಸರದ ನಡುವೆ ನೂತನ ಪಿಯು ಕಾಲೇಜು ಆರಂಭಿಸಿರುವುದು ಉತ್ತಮವಾಗಿದೆ.
ನಾನು ಶಾಸಕನಾದ ನಂತರ ರಸ್ತೆ, ಕುಡಿಯುವ ನೀರು ಹಾಗೂ ಮೂಲ ಸೌಕರ್ಯಗಳ ಕಲ್ಪಿಸಲು ಆದ್ಯತೆ ನೀಡಿದ್ದು, ಪೂರ್ಣ ಪ್ರಜ್ಞಾ ವಿದ್ಯಾಲಯಕ್ಕೆ ಅಗತ್ಯ ಸೌಲಭ್ಯಗಳನ್ನು ನೀಡಿಸಲಾಗುವುದು ಎಂದರು.
ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಸ್.ವಿ.ಮಂಜುನಾಥ್, ಜಂಟಿ ಕಾರ್ಯದರ್ಶಿ ವಿವೇಕ್ ಕಟೀಲ್, ಎ.ಪಿ.ಭಟ್, ಗೋಪಾಲ ಶಬರಾಯ, ರಮಣ ಐತಾಳ್, ರೀನಾ ಡಿಕುನ್ಹ, ರಂಜಿತಾ ಕೊಪ್ಪ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net