ಹಿಂದು ಸಮಾಜ ಸಂಘಟಿಸುವುದೇ ಗುರಿ

11 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಂಪೂರ್ಣ ಹಿಂದು ಸಮಾಜವನ್ನು ಸಂಘಟಿಸುವುದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಗುರಿಯಾಗಿದೆ ಎಂದು ಆರ್​ಎಸ್​ಎಸ್​ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಹೇಳಿದರು.

ನಗರದ ಕೆಸಿಡಿ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಆರ್​ಎಸ್​ಎಸ್​ನ ಕರ್ನಾಟಕ ಉತ್ತರದ ಸಂಘ ಶಿಕ್ಷಾ ವರ್ಗ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದು ಸಮಾಜ ಸಂಘಟಿತ, ಸಮರ್ಥವಾಗಲಿ, ಪ್ರತಿ ವ್ಯಕ್ತಿಯ ಹೃದಯದಲ್ಲಿ ದೇಶ ಭಕ್ತಿಯ ಭಾವ ಜಾಗೃತವಾಗಲಿ ಎಂಬ ಕಾರಣಕ್ಕೆ ಸಂಘ ಆರಂಭಿಸಲಾಯಿತು. ಸಂಘ ಸಮಾಜದೊಳಗೆ ಒಂದು ಸಂಘಟನೆಯಾಗದೆ, ಸಂಪೂರ್ಣ ಹಿಂದು ಸಮಾಜವನ್ನು ಸಂಘಟಿಸುವ ಕೆಲಸ ಮಾಡಬೇಕು ಎಂಬ ಆಶಯ ಹೊಂದಲಾಗಿತ್ತು. ಅದರಂತೆ 100 ವರ್ಷಗಳ ಕಾಲ ಸಂಘ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಒಬ್ಬ ವ್ಯಕ್ತಿಯ ವಿಕಾಸಕ್ಕೆ ಬೇಕಿರುವ ಶಿಕ್ಷಣ, ಸಂಸ್ಕಾರ, ವಿಚಾರವನ್ನು ನೀಡುವ ಕೆಲಸ ಈ ಶಿಕ್ಷಾ ವರ್ಗದಲ್ಲಿ ಮಾಡಲಾಗಿದೆ. ಶರೀರ, ಬುದ್ಧಿ, ಮನಸ್ಸು ಹಾಗೂ ಆತ್ಮಕ್ಕೆ ಸಂಸ್ಕಾರ ಸಿಕ್ಕಾಗ ವ್ಯಕ್ತಿಯ ವಿಕಾಸವಾಗಲಿದೆ. ಈ ಎಲ್ಲ ಸಂಸ್ಕಾರಗಳನ್ನು ಶಿಬಿರದಲ್ಲಿ ನೀಡಲಾಗುತ್ತದೆ ಎಂದರು.

ಆರ್​ಎಸ್​ಎಸ್ ಶತಮಾನೋತ್ಸವ ಸಮಯದಲ್ಲಿ ಕಾರ್ಯ ವಿಸ್ತರಣೆ ಜತೆಗೆ ಪಂಚ ಪರಿವರ್ತನೆ ಕಾರ್ಯವನ್ನು ಹಮ್ಮಿಕೊಂಡಿದೆ. ಕುಟುಂಬ ವ್ಯವಸ್ಥೆ ಗಟ್ಟಿಗೊಳಿಸುವುದು, ಅಸಶ್ಯತೆ ಆಚರಣೆ ಹೋಗಲಾಡಿಸುವುದು, ಪರಿಸರ ರಕ್ಷಣೆ, ಸ್ವದೇಶಿಗೆ ಆದ್ಯತೆ, ನಾಗರಿಕ ಶಿಷ್ಟಾಚಾರ ಅಳವಡಿಸಿಕೊಳ್ಳುವುದು ಹೀಗೆ 5 ಅಂಶಗಳ ಕಾರ್ಯ ನಡೆಸಲಾಗುವುದು. ಇವೆಲ್ಲವನ್ನು ಸ್ವಯಂ ಸೇವಕ ಮೊದಲು ತನ್ನ ಕುಟುಂಬದಲ್ಲಿ ಅಳವಡಿಸಿಕೊಂಡು ನಂತರ ಇಡೀ ಸಮಾಜಕ್ಕೆ ಇದರ ಬಗ್ಗೆ ಜಾಗೃತಿ ಮೂಡಿಸುವುದೇ ಉದ್ದೇಶವಾಗಿದೆ ಎಂದು ರಾವೇಂದ್ರ ಕಾಗವಾಡ ಹೇಳಿದರು.

ಸಮಾಜ ಸೇವಕ ಆನಂದ ಕಡಕೋಳ ಮಾತನಾಡಿದರು. ಪ್ರಾಂತ ಸಂಚಾಲಕ ಬಸವರಾಜ ಡಂಬಳ, ಧಾರವಾಡ ವಿಭಾಗ ಸಂಚಾಲಕ ಗೋವಿಂದಪ್ಪ ಗೌಡಪ್ಪಗೋಳ, ಜಿಲ್ಲಾ ಸಂಚಾಲಕ ಡಾ. ವೇದವ್ಯಾಸ ದೇಶಪಾಂಡೆ, ಇತರರು ಇದ್ದರು.

ರಾಮನಗೌಡ ಪಾಟೀಲ ಸ್ವಾಗತಿಸಿದರು. ನಿತೀಶ ಅಂಕೋಲೆಕರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net