

ಮಂಡ್ಯ: ಸಚಿವನಾದ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಬಂದಿದ್ದು ತುಂಬಾ ಖುಷಿಯಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿ ಮಾಡುವುದು ನನ್ನ ಗುರಿ ಎಂದು ನೂತನ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ನಗರದ ಲಕ್ಷ್ಮೀ ಜನಾರ್ಧನಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಮೈಶುಗರ್ ಮತ್ತು ಪಿಎಸ್‌ಎಸ್‌ಕೆಯನ್ನು ಪ್ರಾರಂಭಿಸುತ್ತೇವೆ. ಈಗಾಗಲೇ ಈ ಸಂಬಂಧ ಜಿಲ್ಲಾಧಿಕಾರಿ ಜತೆ ಮಾತನಾಡಿದ್ದೇನೆ. ಯಾವ ಖಾತೆ ಕೊಡಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೊತ್ತಿದೆ. ಅಂತೆಯೇ, ಯಾವ ಖಾತೆ ಕೊಟ್ಟರೂ ನಿಭಾಯಿಸಿ ಸರ್ಕಾರಕ್ಕೆ ಉತ್ತಮ ಹೆಸರು ಬರುವ ಕೆಲಸ ಮಾಡುತ್ತೇನೆ ಎಂದರು.
ಜೆಡಿಎಸ್ ನಾಯಕರ ಟೀಕೆ ವಿಚಾರ ಬಗ್ಗೆ ನಾನು ಮಾತನಾಡುವುದಿಲ್ಲ. ಅಭಿವೃದ್ಧಿ ಕಡೆ ಮಾತ್ರ ನನ್ನ ಗಮನ ಹರಿಸುತ್ತೇನೆ. ಟೀಕೆ ಮಾಡುವುದಿಲ್ಲ. ಬಾಯಿ ಬಿಚ್ಚಿದರೆ ಎಲ್ಲಿಗೋ ಹೋಗುತ್ತೆ. ಜೆಡಿಎಸ್ ನಾಯಕರು ತಟಸ್ಥವಾಗಿದ್ದರೆ ತುಂಬಾ ಒಳ್ಳೆಯದು. ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ತುಂಬಾ ಗುರಿಗಳಿವೆ. ಹಂತ ಹಂತವಾಗಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ನಗರಸಭೆ ಸದಸ್ಯ ಅರುಣ್‌ಕುಮಾರ್ ಇತರರಿದ್ದರು. ಇದಕ್ಕೂ ಮುನ್ನ ನೂತನ ಸಚಿವರಿಗೆ ಕಾರ್ಯಕರ್ತರು ಹೂಗುಚ್ಛ ನೀಡಿ ಸ್ವಾಗತ ಕೋರಿದರು.