ಇಪ್ಪತ್ತೊಂದನೆ ಶತಮಾನದಲ್ಲೇ ಕಾವ್ಯ ವೈಭವ: ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಅಭಿಮತ

13
Published on

ಮೈಸೂರು: ಇಪ್ಪತ್ತೊಂದನೆ ಶತಮಾನದಲ್ಲಿ ದೊರೆತಂತಹ ದೊಡ್ಡ ಪ್ರಮಾಣದ ಕಾವ್ಯ ವೈಭವವನ್ನು ಬೇರೆ ಕಾಲಘಟ್ಟದಲ್ಲಿ ಕಾಣಲು ಸಾಧ್ಯವಾಗುವುದಿಲ್ಲ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.
ಡಿವಿಜಿ ಬಳಗ ಪ್ರತಿಷ್ಠಾನದಿಂದ ಕೃಷ್ಣಮೂರ್ತಿಪುರಂನ ಶಾರದ ವಿಲಾಸ ಶತಮಾನೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಬೆಂಗಳೂರಿನ ಸತ್ಯೇಶ್ ಎನ್.ಬೆಳ್ಳೂರ್ ಅವರಿಗೆ ‘ಡಿವಿಜಿ ಪ್ರಶಸ್ತಿ-2024’ ಪ್ರದಾನ ಮಾಡಿ ಮಾತನಾಡಿದರು.
ಇಪ್ಪತ್ತನೇ ಶತಮಾನದ ಸಾಹಿತ್ಯ ಕ್ಷೇತ್ರದ ಆಳ ಮತ್ತು ಹರವು ಬಹಳ ದೊಡ್ಡದು. ಮಹಾಕಾವ್ಯಗಳು, ಕಾದಂಬರಿ-ನಾಟಕಗಳು, ಕತೆ, ಕವಿತೆ, ಚುಟುಕು-ಹನಿ ಗವನಗಳ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಾಕಾರಗಳು ಹುಟ್ಟಿಕೊಂಡವು. ಆದರೆ 21ನೇ ಶತಮಾನದಲ್ಲಿ ದೊರೆತಂತಹ ಈ ಪ್ರಮಾಣದ ಕಾವ್ಯ ವೈಭವವನ್ನು ಬೇರೆಬೇರೆ ಕಾಲಘಟ್ಟದಲ್ಲಿ ಕಾಣಲು ಸಾಧ್ಯವಾಗುವುದಿಲ್ಲ ಎಂದರು.
ಯಾವುದೋ ಒಂದು ಬಗೆಯ ಚಿಂತನೆ ಮತ್ತು ಹೊಸ ವಿಚಾರ ಒಂದು ಪರಂಪರೆಯನ್ನೇ ಹುಟ್ಟು ಹಾಕುತ್ತದೆ. ಜೀವನವನ್ನು ಮೊದಲಿನ ಹಾಗೆ ಇರದ ರೀತಿಯಲ್ಲಿ ಬದಲಾಯಿಸಿ ಬಿಡುತ್ತದೆ ಎನ್ನ್ನುವುದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣೆಗಳು ಇವೆ ಎಂದರು.
ಆದಿ ಮಾನವನ ಕಾಲದಿಂದಲೂ ಇಂತಹ ವಿಚಾರ ಮತ್ತು ಆವಿಷ್ಕಾರಗಳು ನಡೆದುಕೊಂಡು ಬಂದಿದೆ. ಸಿಡಿಲಿನಿಂದಲೋ ಅಥವಾ ಇನ್ನಿತರ ಕಾರಣಗಳಿಂದಲೋ ಉಂಟಾದ ಬೆಂಕಿಗೆ ಹೆದರುತ್ತಿದ್ದ ಆದಿಮಾನವ ನಂತರ ಆ ಬೆಂಕಿಯನ್ನೇ ತನಗೆ ಬೇಕಾದಾಗ ಹಚ್ಚಿಕೊಳ್ಳುವ ಮತ್ತು ಬೇಡವಾದಗ ಹಾರಿಸುವ ವಿಧಾನವನ್ನು ಕರಗತ ಮಾಡಿಕೊಂಡಿದ್ದಾನೆ ಎಂದು ವಿಶ್ಲೇಷಿಸಿದರು.
ಮನುಷ್ಯ ಯಾವಾಗ ಬೆಂಕಿಯಿಂದ ಬೆಳಕು ಮತ್ತು ಶಾಖವನ್ನು ಪಡೆಯುವ ಕಲೆಯನ್ನು ಸಿದ್ಧಿಸಿಕೊಂಡನೋ ಆಗಲೇ ಮಾನವನ ಇತಿಹಾಸ ಬದಲಾಯಿತು. ಕಾಲಾನಂತರದಲ್ಲಿ ಆದ ಅಕ್ಷರ ಆವಿಷ್ಕಾರವೇ ಒಂದು ಬಹುದೊಡ್ಡ ಬದಲಾವಣೆಯಾಗಿದೆ. ಅಕ್ಷರಗಳು ಇರುವ ಕಾರಣದಿಂದಾಗಿಯೇ ನಾವೆಲ್ಲರೂ ವಿದ್ಯಾವಂತರು ಎನಿಸಿಕೊಂಡಿದ್ದೇವೆ. ಅಕ್ಷರದ ಆವಿಷ್ಕಾರದಿಂದಲೇ ಸಾಹಿತ್ಯ ಪ್ರಾಕಾರಗಳು ಹುಟ್ಟಿಕೊಂಡವು. ಸಾಹಿತ್ಯದಲ್ಲಿಯೂ ಮಹಾಕಾವ್ಯಗಳು ಪ್ರಾಧಾನ್ಯತೆ ಪಡೆದುಕೊಂಡವು ಎಂದು ಹೇಳಿದರು.
ರಾಮಾಯಣ ಮಹಾಕಾವ್ಯದಲ್ಲಿ ಕಂಡುಬರುವ ರಾಮನನ್ನು ಶತ ಶತಮಾನಗಳವರೆಗೆ ಕಾಯ್ದಿಟ್ಟುಕೊಂಡವರು ಕವಿಗಳು. ಆದ್ದರಿಂದ ರಾಮನಷ್ಟೇ ವಾಲ್ಮೀಕಿಯೂ ದೊಡ್ಡವರಾಗಿ ನಿಲ್ಲುತ್ತಾರೆ. ವಾಲ್ಮೀಕಿ ರಾಮಾಯಣ ಬರೆಯದೇ ಹೋಗಿದ್ದರೆ ರಾಮ ಯಾರಿಗೂ ಗೊತ್ತಾಗುತ್ತಲೇ ಇರಲಿಲ್ಲ. ಆದ್ದರಿಂದ ಕವಿಯೂ ತಾನು ಚಿತ್ರಿಸಿದ ನಾಯಕ ದೊಡ್ಡವನಾಗಲು ಕಾರಣನಾಗುತ್ತಾನೆ ಎಂದರು.
ಅವಿಷ್ಕಾರ ಕೆಲವೊಮ್ಮೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಮೊದ ಮೊದಲು ಸಂವಹನದ ಕೊರತೆಯ ಕಾರಣದಿಂದ ಸಾಕಷ್ಟು ಸಮಸ್ಯೆಗಳು, ತಕರಾರುಗಳು ಉಂಟಾಗುತ್ತಿದ್ದವು. ಬದಲಾದ ಕಾಲಘಟ್ಟದಲ್ಲಿ ಮೊಬೈಲ್ ಸೇರಿದಂತೆ ಇತ್ಯಾದಿ ಆಧುನಿಕ ಅವಿಷ್ಕಾರಗಳು ಸಂವಹನ ಸರಳಗೊಳಿಸಿದೆ. ಆದರೆ ಅತಿಯಾದ ಸಂವಹನ ಸಾಧನಗಳ ಕಾರಣದಿಂದಾಗಿಯೇ ಸಮಸ್ಯೆಗಳು ಎದುರಾಗುತ್ತಿವೆ ಎಂದು ಬೇಸರಿಸಿದರು.
ಕವಿ ಕೆ.ಸಿ.ಶಿವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿವಿಜಿ ಬಳಗ ಪ್ರತಿಷ್ಠಾನದ ಸಂಚಾಲಕ ಸಿ.ಕನಕರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net