ಕೆಂಡ ಬಸವೇಶ್ವರ ಮಹಿಮೆ ಅಪಾರ

 ಕಲ್ಲಳ್ಳ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ಹೊರನೋಟ.
ಕಲ್ಲಳ್ಳ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ಹೊರನೋಟ.
Published on

ಸಿದ್ದಾಪುರ: ಕೋರಿಕೆಗಳನ್ನು ಈಡೇರಿಸುವ ಮೂಲಕ ಬಸವೇಶ್ವರಸ್ವಾಮಿ ಭಕ್ತರ ಪಾಲಿನ ಆರಾಧ್ಯ ದೈವವಾಗಿ ನೆಲೆ ನಿಂತಿದೆ. ಇದೀಗ ಈ ದೇವಸ್ಥಾನ ಶ್ರದ್ಧಾ ಕೇಂದ್ರವಾಗಿ ಮಾರ್ಪಟ್ಟಿದೆ.

ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಬಳಿಯ ಕಲ್ಲಳ್ಳ ಗ್ರಾಮದಲ್ಲಿರುವ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನ ಇತಿಹಾಸ ಪ್ರಸಿದ್ಧವಾಗಿದ್ದು, ತನ್ನ ಪೌರಾಣಿಕ ಹಿನ್ನೆಲೆಯಿಂದ ಅಪಾರ ಭಕ್ತ ಸಮೂಹವನ್ನು ಹೊಂದಿದೆ. ಭಕ್ತರ ಎಲ್ಲ ಕೋರಿಕೆಗಳನ್ನು ಈಡೇರಿಸುವ ಬಸವೇಶ್ವರನನ್ನು ಸುತ್ತಮುತ್ತಲಿನ ಗ್ರಾಮಸ್ಥರು ಪೂಜಿಸುತ್ತಿದ್ದಾರೆ. ಸುಂದರವಾದ ಬಸವೇಶ್ವರ ವಿಗ್ರಹದಿಂದ ದೇವಾಲಯ ಇನ್ನಷ್ಟು ಹೆಸರುವಾಸಿಯಾಗಲು ಕಾರಣವಾಗಿದೆ. ಜತೆಗೆ ಬಸವೇಶ್ವರ ಮೂರ್ತಿಗೆ ವಿಶೇಷವಾದ ಶಕ್ತಿ ಇದೆ. ಬಸವೇಶ್ವರ ಮೂರ್ತಿ ಕೆಂಡ ಬಸವೇಶ್ವರ ಎಂದೇ ಪ್ರಸಿದ್ಧಿ ಪಡೆದಿದ್ದು, ಹರಕೆ ಹೊತ್ತ ಭಕ್ತರು ದೇವಸ್ಥಾನದ ಪಕ್ಕದಲ್ಲಿ ಕೊಂಡ ಹಾಯುವ ಪದ್ಧತಿ ಹಿಂದೆ ನಡೆಯುತ್ತಿತ್ತು.

ಮಾಲ್ದಾರೆ ಗ್ರಾಮದ ದಿ.ಎ.ಕೆ.ಅಚ್ಚುತನ್, ದಿ.ನಾಯಡ ಸೋಮಯ್ಯ, ದಿ.ಕಾಯರ ಚಿನ್ನಪ್ಪ ದಿ.ಕೆ.ಎ ಕುಟ್ಟಪ್ಪ ಅವರ ಪ್ರಯತ್ನದಿಂದಾಗಿ 1972ರಲ್ಲಿ ದೇಗುಲ ಸ್ಥಾಪಿಸಲ್ಪಟ್ಟಿತ್ತು. ವರ್ಷಗಳು ಕಳೆದಂತೆ ಈ ದೇವಾಲಯ ಹಳೆಯದಾಗಿ ಶಿಥಿಲಾವಸ್ಥೆ ತಲುಪಿದ್ದರಿಂದ ಗ್ರಾಮಸ್ಥರು ಹಾಗೂ ಭಕ್ತರು ಸೇರಿ ಬಿಳಿಗೇರಿ ತಂತ್ರಿಉದಯಕುಮಾರ್ ಅವರನ್ನು ಕರೆಸಿ ತಾಂಬೂಲ ಪ್ರಶ್ನೆ ಇಟ್ಟು ನೋಡಿದಾಗ ದೇವಸ್ಥಾನವನ್ನು ಒಡೆದು ಜೀರ್ಣೋದ್ಧಾರ ಮಾಡಬೇಕೆಂಬ ಉತ್ತರ ಸಿಕ್ಕಿತು. ಅಂತಿಮವಾಗಿ ಬಸವೇಶ್ವರ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ದೇವಾಲಯವನ್ನು ಲೋಕಾರ್ಪಣೆ ಮಾಡಲಾಯಿತು.

ಬಸವೇಶ್ವರ ದೇವಾಲಯಕ್ಕೆ ಆಡಳಿತ ಮಂಡಳಿ ಇದ್ದು, ಮಹಾ ಶಿವರಾತ್ರಿ, ಕಾರ್ತಿಕ ಪೂಜೆ, ದೀಪಾವಳಿ, ಗೌರಿ ಗಣೇಶ ಹಬ್ಬವನ್ನು ಪ್ರತಿ ವರ್ಷ ವಿಶೇಷವಾಗಿ ಆಚರಿಸಲಾಗುತ್ತದೆ. ಅಲ್ಲದೆ ವಿಶೇಷ ದಿನಗಳಲ್ಲಿ ರುದ್ರಾಭಿಷೇಕ ಸೇರಿದಂತೆ ಇತರ ಪೂಜಾ ವಿಧಿವಿಧಾನ ನೆರವೇರಲಿದೆ. ವಾರ್ಷಿಕ ಪೂಜೆ ಸಂದರ್ಭ 500ಕ್ಕೂ ಹೆಚ್ಚು ಭಕ್ತರು ಆಗಮಿಸಲಿದ್ದು, ಅನ್ನದಾನ ವ್ಯವಸ್ಥೆ ಇರಲಿದೆ.

ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವ: ವಾರ್ಷಿಕ ಮಹೋತ್ಸವ ಸಂದರ್ಭ ಕೊಡಗಿನ ಗಡಿ ಭಾಗದ ದುಬಾರೆ ಅರಣ್ಯದ ಒಳಭಾಗದಲ್ಲಿನ ಬೆಟ್ಟದ ತುದಿಯಲ್ಲಿರುವ ಪುರಾತನ ಗದ್ದಿಗೆ ಶ್ರೀಸಿದ್ದೇಶ್ವರ ದೇಗುಲದಲ್ಲಿ ಮೊದಲು ಪೂಜೆ ಸಲ್ಲಿಸಲಾಗುತ್ತದೆ. ನಂತರ ಬಸವೇಶ್ವರ ದೇವಸ್ಥಾನದಲ್ಲಿ ಗಂಗಾಮಾತೆ ಪೂಜೆ, ಮಹಾಗಣಪತಿ ಪೂಜೆ, ಪಂಚಕಳಸ, ನವಗ್ರಹ ಪೂಜೆ, ಮಹಾ ಮೃತ್ಯಂಜಯ ಪೂಜೆ, ಅಷ್ಟಲಕ್ಷ್ಮೀ ಪೂಜೆ ನಂತರ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ ಪೂರ್ಣಾಹುತಿ ನೆರವೇರಲಿದೆ. ಬಳಿಕ ಬಸವೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ, ವಾಸ್ತುಬಲಿ, ನೇತ್ರೋಲನ, ಕದಳಿಛೇದನ, ಮಹಾಮಂಗಳಾರತಿ ನೆರವೇರಲಿದೆ.

ದೇವಾಲಯದ ಹಿನ್ನೆಲೆ: ಸುಮಾರು 800 ವರ್ಷಗಳ ಹಿಂದೆ ಪವಾಡ ಪುರುಷ ಲಿಂಗರಾಜರು ಈ ಹಾದಿಯ ಮೂಲಕ ಕೊಡಗಿಗೆ ಪ್ರವೇಶಿಸಿದ ಸಂದರ್ಭ ಈ ದೇವಸ್ಥಾನ ನಿರ್ಮಾಣ ಮಾಡಲಾಯಿತು ಎಂದು ಹೇಳಲಾಗುತ್ತದೆ.

ತಲುಪುವ ಮಾರ್ಗ: ಈ ದೇವಾಲಯ ಸಿದ್ದಾಪುರ ಮತ್ತು ಮೈಸೂರಿಗೆ ಸಂಪರ್ಕ ಕಲ್ಪಿಸುವ ಕಲ್ಲಳ್ಳ ಗ್ರಾಮದಲ್ಲಿದೆ. ಮಡಿಕೇರಿಯಿಂದ ಸಿದ್ದಾಪುರ ಮಾರ್ಗವಾಗಿ ಬರುವವರಿಗೆ ಮಾಲ್ದಾರೆ ಕಲ್ಲಳ್ಳ ಗ್ರಾಮದಲ್ಲಿರುವ ಬಸವೇಶ್ವರ ದೇವಾಲಯಕ್ಕೆ 40 ಕಿ.ಮೀ. ಹಾಗೂ ವಿರಾಜಪೇಟೆಯಿಂದ ಬರುವವರು ಅಮ್ಮತ್ತಿ ಮಾರ್ಗವಾಗಿ 19 ಕಿ.ಮೀ. ಕ್ರಮಿಸಬೇಕು. ಗೋಣಿಕೊಪ್ಪದಿಂದ 15 ಕಿ.ಮೀ. ಕ್ರಮಿಸಿದರೆ ಈ ಗ್ರಾಮವು ಕೊಡಗಿನ ಗಡಿ ಭಾಗದಲ್ಲಿ ಇದೆ.

35 ವರ್ಷದಿಂದ ಇಲ್ಲಿನ ಶ್ರೀಬಸವೇಶ್ವರ ಮೂರ್ತಿಗೆ ದೀಪವಿಟ್ಟು ಪೂಜೆ ಸಲ್ಲಿಸಲಾಗುತ್ತದೆ. ಇದೀಗ ಈ ವರ್ಷ ಶ್ರೀಬಸವೇಶ್ವರ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ದೇವಾಲಯವನ್ನು ಲೋಕಾರ್ಪಣೆ ಮಾಡಲಾಗಿದೆ. ಭಕ್ತರ ಕೋರಿಕೆಯನ್ನು ದೇವರು ಈಡೇರಿಸಲಿದ್ದು, ಇಂದಿಗೂ ಭಕ್ತರು ತಮ್ಮ ಕೋರಿಕೆ ಸಲ್ಲಿಸಿ ಒಳಿತು ಕಂಡಿರುವ ಉದಾಹರಣೆ ಇದೆ.

ಟಿ.ಎಂ.ರವಿ ದೇವಸ್ಥಾನ ಸೇವಕ

ಅನಾದಿ ಕಾಲದಿಂದಲೂ ಇಲ್ಲಿ ದೇವರ ಆರಾಧನೆ ನಡೆಯುತ್ತಲೇ ಇದೆ. ಜನರು ತಮ್ಮ ಕಷ್ಟಗಳನ್ನು ದೂರ ಮಾಡುವಂತೆ ಕೋರಿ ಬಸವೇಶ್ವರ ದೇವರಲ್ಲಿ ಹರಕೆ ಹೊರುತ್ತಾರೆ. ಇಲ್ಲಿನ ಬಸವೇಶ್ವರ ಮೂರ್ತಿಗೆ ವಿಶೇಷವಾದ ಶಕ್ತಿ ಇದೆ. ಈ ಬಸವೇಶ್ವರ ಮೂರ್ತಿ ಕೆಂಡ ಬಸವೇಶ್ವರ ಎಂದೇ ಪ್ರಸಿದ್ಧಿ ಪಡೆದಿದೆ. ಹಿಂದೆ ಭಕ್ತರು ಕೊಂಡ ಹಾಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಸ್ವಾಮಿಗೆ ಕೆಂಡ ಬಸವೇಶ್ವರ ಎಂಬ ಹೆಸರು ಬಂದಿದೆ.

ಸರಸ್ವತಿ ಗ್ರಾಮ ಪಂ ಸದಸ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net