ಏ.29 ರಿಂದ ಬಸವಾದಿ ಶರಣರ ವೈಭವ

The glory of Basavadi Sharanar from April 29
ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕ ವಿಜಯಾನಂದ ಕಾಶಪ್ಪನವರ, ನಿಜಗುಣಾನಂದ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ ಮತ್ತಿತರರಿದ್ದಾರೆ.
Published on

ಕೂಡಲಸಂಗಮ: ಬಸವ ಜಯಂತಿ ಅಂಗವಾಗಿ ಏ.29 ಹಾಗೂ 30ರಂದು ಕೂಡಲಸಂಗಮದಲ್ಲಿ ಅನುಭವ ಮಂಟಪ ಬಸವಾದಿ ಶರಣರ ವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸಾಂಸ್ಕೃತಿಕ ನಾಯಕ ಎಂಬುದು ಘೋಷಣೆಗೆ ಸಿಮೀತವಾಗದೇ ಆಚರಣೆಗೆ ತರಬೇಕು, ಬಸವಾದಿ ಶರಣರ ತತ್ವಗಳು ಇಂದಿನ ಯುವ ಜನಾಂಗಕ್ಕೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮಕ್ಕೆ 25 ಸಾವಿರ ಜನ ಸೇರುವ ನಿರೀಕ್ಷೆ ಇದೆ. 1.5 ಕೋಟಿ ಅನುದಾನವು ಇದೆ. ಕಾರ್ಯಕ್ರಮದ ಯಶಸ್ವಿಗಾಗಿ 11 ಸಮಿತಿಗಳನ್ನು ರಚಿಸಲಾಗಿದೆ. ಏ.16 ರಂದು ಸ್ಥಬ್ದ ಚಿತ್ರದ ರಥಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದೂ, ಜಿಲ್ಲೆಯಾದ್ಯಂತ ಸಂಚರಿಸಿ ಪ್ರಚಾರ ಮಾಡಲಾಗುವುದು ಎಂದರು.

ಏ. 29 ರಂದು 4 ಚಿಂತನಗೋಷ್ಠಿಗಳನ್ನು ಆಯೋಜಿಸಲಾಗಿದೆ. ರಾತ್ರಿ ಬಸವಣ್ಣನವರ ಕುರಿತು ನಾಟಕ ಜರುಗಲಿದೆ. ಏ.30ರಂದು ಮುಖ್ಯಮಂತ್ರಿಗಳು ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ಪುಸ್ತಕ ಬಿಡುಗಡೆ ಆಗುತ್ತದೆ. ಸಚಿವ ಸಂಪುಟದ ಎಲ್ಲ ಸಚಿವರು, ಶಾಸಕರು ಆಗಮಿಸುವರು. ಹಿಂದು, ಲಿಂಗಾಯತ, ಮುಸ್ಲಿಂ, ಬೌದ್ಧ, ಜೈನ ಧರ್ಮ ಗುರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದರು.

ಅಬಕಾರ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಜನರು ಸಾಮರಸ್ಯದಿಂದ ಬದುಕಲು ಬಸವಾದಿ ಶರಣರ ಚಿಂತನೆಗಳು ಅಗತ್ಯ ಇದ್ದು, ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಈ ಭಾಗದ ಬಸವ ಭಕ್ತರ ಬಹುದಿನದ ಬೇಡಿಕೆಯನ್ನು ಸರ್ಕಾರ ಇಡೇರಿಸಿದೆ. ಈ ಕಾರ್ಯಕ್ರಮ ಪ್ರತಿ ವರ್ಷ ನಡೆಯಬೇಕು. ಈ ಕುರಿತು ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ಮಾತನಾಡಿದ್ದೇನೆ ಎಂದರು.

ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿದರು. ಇಳಕಲ್ಲ ವಿಜಯಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ಶಿರೂರದ ಬಸವಲಿಂಗ ಸ್ವಾಮೀಜಿ, ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸಾಹಿತಿಗಳಾದ ರಂಜಾನ ದರ್ಗಾ, ವೀರಣ್ಣ ರಾಜೂರ, ಬಿ.ಟಿ. ಲಲಿತಾನಾಯಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net