

ಸಾಲಿಗ್ರಾಮ: ಕಷ್ಟದಲ್ಲಿ ಕಣ್ಣೀರಿಡುವ ಭಕ್ತರನ್ನು ಕಾಪಾಡುವ ಮೂಲಕ ಮಿರ್ಲೆ ಅಗಸ್ತ್ಯೇಶ್ವರ(ಈಶ್ವರ) ಈ ಭಾಗದ ಜನರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾನೆ.
ಇತಿಹಾಸ, ಪುರಾಣ ಪ್ರಸಿದ್ಧ ಹಾಗೂ ಪುಣ್ಯಕ್ಷೇತ್ರವೆಂದೇ ಮನೆಮಾತಾಗಿರುವ ಅಗಸ್ತ್ಯೇಶ್ವರ ದೇವಾಲಯ ಮಿರ್ಲೆ ಗ್ರಾಮದ ಕಾವೇರಿ ನದಿ ತೀರದಲ್ಲಿದೆ. ಭಕ್ತರ ಎಲ್ಲ ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ಈಶ್ವರ ಮನೆ ಮಾತಾಗಿದ್ದು. ಶತಮಾನದಿಂದಲೂ ಈತನಿಗೆ ಸೇವೆ ತಪ್ಪದೆ ನಡೆಯುತ್ತಿದೆ. ಪಾಳೆಗಾರರ ಆಳ್ವಿಕೆಯಿಂದಲೂ ಪ್ರತಿ ವರ್ಷ ಶಿವರಾತ್ರಿ ದಿನದಂದು ಸೂರ್ಯನ ಕಿರಣ ಶಿವಲಿಂಗದ ಮೇಲೆ ಸ್ಪರ್ಶಿಸುತ್ತದೆ. ಇದರಿಂದಾಗಿ ಇದು ಪುಣ್ಯ ಸ್ಥಳವಾಗಿರುವುದರಿಂದ ಆ ದಿನ ಇಲ್ಲಿ ಸಾವಿರಾರು ಜನ ಸೇರಿ ಪೂಜೆ ಸಲ್ಲಿಸುತ್ತಾರೆ.
ದೇವಸ್ಥಾನದ ಹಿನ್ನೆಲೆ: 15ನೇ ಶತಮಾನದ ಗಂಗರ ಕಾಲದಲ್ಲಿ ಚಂಗಳೂರು ಸಣ್ಣನಾಯಕ ಎಂಬ ಪಾಳೆಗಾರ ಹನಸೋಗೆ, ಸಾಲಿಗ್ರಾಮ, ಭೇರ್ಯ, ಮಿರ್ಲೆ, ಹೊಸ ಅಗ್ರಹಾರ, ಕೇರಳಾಪುರ ವ್ಯಾಪ್ತಿಯಲ್ಲಿ ಆಳ್ವಿಕೆ ಮಾಡುತ್ತಿದ್ದ. ಆ ಸಂದರ್ಭದಲ್ಲಿ ಜನರ ನೆಮ್ಮದಿ ಮತ್ತು ಶಾಂತಿಗಾಗಿ ಈಶ್ವರ ದೇವಸ್ಥಾನ ನಿರ್ಮಿಸಿದ ಎಂಬುದು ಈಗ ಇತಿಹಾಸ. ಮಿರ್ಲೆ ಸಮೀಪವಿರುವ ಈ ದೇವಸ್ಥಾನಕ್ಕೆ ಇತಿಹಾಸವಿದೆ. ಮಿರ್ಲೆಯಲ್ಲಿ ಬಹುತೇಕ ಬ್ರಾಹ್ಮಣರು, ಬಣಜಿಗ ಶೆಟ್ಟರು, ಗೌಡರು ಹಾಗೂ ಪರಿಶಿಷ್ಟರು ವಾಸವಿದ್ದು, ಈಶ್ವರನ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಕಾವೇರಿ ಬ್ರಹ್ಮನ ಮಗಳಾಗಿದ್ದು ಭಾಗಮಂಡಲದ ತಲಕಾವೇರಿಯಲ್ಲಿ ಕಾವೇರಿ ನದಿಯಾಗಿ ಪರಿವರ್ತನೆಯಾಗುತ್ತಾಳೆ ಎಂಬುದನ್ನು ಇತಿಹಾಸ ಹೇಳುತ್ತದೆ. ಅಗಸ್ತ್ಯ ಋಷಿಮುನಿಗಳ ಸಂಚಾರದ ವೇಳೆ ಋಷಿಮುನಿಗಳೊಂದಿಗೆ ಕಾವೇರಿ ನದಿಯಾಗಿ ಸಾಗುತ್ತ ಬರುತ್ತಾಳೆ. ಈ ಸಂದರ್ಭ ಋಷಿಮುನಿಗಳು ವಿಶ್ರಾಂತಿಗೆಂದು ಈಶ್ವರ ದೇವಸ್ಥಾನದ ಬಳಿ ಕೂರುತ್ತಾರೆ. ಆಗ ಕಾವೇರಿ ಈ ದೇವಸ್ಥಾನದ ಬಳಿ ಹರಿದು ಹೋಗುತ್ತಾಳೆ. ಆನಂತರ ನದಿಯಲ್ಲಿ ಸ್ನಾನ ಮುಗಿಸಿದ ಋಷಿಮುನಿಗಳು ಇಲ್ಲಿ ಶಿವನ ಧ್ಯಾನ ಮಾಡುತ್ತಾರೆ. ಅದಕ್ಕಾಗಿ ಈ ದೇವಸ್ಥಾನ ಮತ್ತು ಸ್ಥಳವನ್ನು ಅಗಸ್ತ್ಯೇಶ್ವರ ಎಂದು ಕರೆಯಲ್ಪಡುತ್ತದೆ.
ಏನಿದು ಸಂಧ್ಯಾ ಮಂಟಪ?: ಮಿರ್ಲೆ ಗ್ರಾಮದಲ್ಲಿ ಬಹುತೇಕ ಬ್ರಾಹ್ಮಣರು ವಾಸವಿರುವುದರಿಂದ ಇಲ್ಲಿನ ಪ್ರತಿ ಕುಟುಂಬ ಕಾವೇರಿ ನದಿಯಲ್ಲಿ ಸ್ನಾನ ಮುಗಿಸಿ ಪಕ್ಕದಲ್ಲಿರುವ ಅಗಸ್ತ್ಯೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಭಕ್ತರಿಗೆ ಅನುಕೂಲವಾಗುವಂತೆ ಅಗಸ್ತ್ಯೇಶ್ವರ ದೇವಸ್ಥಾನದ ಬಳಿ ಮಿರ್ಲೆ ಜಮೀನ್ದಾರರಾಗಿದ್ದ ನಾಗಣ್ಣ ಅವರು ಸುಮಾರು 185 ವರ್ಷಗಳ ಹಿಂದೆ ಸಂಧ್ಯಾ ಮಂಟಪ ನಿರ್ಮಿಸಿದರು. ನಂತರ ಬಂದ ಋಷಿಮುನಿಗಳು ಮತ್ತು ಭಕ್ತರು ನದಿಯಲ್ಲಿ ಸ್ನಾನ ಮುಗಿಸಿ ಸಂಧ್ಯಾ ಮಂಟಪದಲ್ಲಿ ಈಶ್ವರನ ಧ್ಯಾನ ಮಾಡುತ್ತಿದ್ದರು. ಮಿರ್ಲೆ, ಗಂಧನಹಳ್ಳಿ, ಗಂಧನಹಳ್ಳಿ ಕೊಪ್ಪಲು, ಬೀಚನಹಳ್ಳಿ, ಬೀಚನಹಳ್ಳಿ ಕೊಪ್ಪಲು, ಹನಸೋಗೆ, ಚುಂಚನಕಟ್ಟೆ, ಹೊಸೂರು, ಸಾಲಿಗ್ರಾಮ, ಭೇರ್ಯ, ಹೊಸ ಅಗ್ರಹಾರ, ತಂದ್ರೆ ಗ್ರಾಮಸ್ಥರು ಇಂದಿಗೂ ಕೂಡ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸುತ್ತಾರೆ.
ಗಂಧನಹಳ್ಳಿ, ಗಂಧನಹಳ್ಳಿ ಕೊಪ್ಪಲು, ಬೀಚನಹಳ್ಳಿ, ಬೀಚನಹಳ್ಳಿ ಕೊಪ್ಪಲು ಗ್ರಾಮದ ಸುಮಾರು 5 ಸಾವಿರಕ್ಕೂ ಹೆಚ್ಚು ಭಕ್ತರು ಪ್ರತಿ ವರ್ಷ ಯುಗಾದಿ ಹಬ್ಬದ ಮುಂಚಿತವಾಗಿ ದೇವರನ್ನು ಕಾವೇರಿ ನದಿಯಲ್ಲಿ ತೊಳೆದು ಕಪ್ಪಡಿ, ಚುಂಚನಕಟ್ಟೆಯ ಶ್ರೀರಾಮ ದೇವಸ್ಥಾನ ಮಾರ್ಗವಾಗಿ ಅಗಸ್ತ್ಯೇಶ್ವರ ದೇವಸ್ಥಾನಕ್ಕೆ ನಡೆದುಕೊಂಡು ಬರುತ್ತಾರೆ. ಇವರೊಂದಿಗೆ ಮಹಿಳೆಯರು ಕಳಸ ಹೊತ್ತು ತಂದು ದೇವರಿಗೆ ಪೂಜೆ ಸಲ್ಲಿಸುವುದು ವಾಡಿಕೆ.
ಬೇಕಿದೆ ಸರ್ಕಾರ, ದಾನಿಗಳ ನೆರವು; ಪುರಾಣ ಪ್ರಸಿದ್ಧ ದೇವಸ್ಥಾನ ಶಿಥಿಲಗೊಂಡಿದ್ದು, ಕಲ್ಲುಗಳಿಂದ ಸುಂದರವಾಗಿ ನಿರ್ಮಿಸಿದ ಸಂಧ್ಯಾ ಮಂಟಪ ಕುಸಿಯುತ್ತಿದೆ. ಇದನ್ನು ಅಭಿವೃದ್ಧಿ ಮಾಡಬೇಕೆಂಬ ನಿಟ್ಟಿನಲ್ಲಿ ಸ್ಥಳೀಯರು ಸಮಿತಿ ರಚಿಸಿಕೊಂಡಿದ್ದು, ಇದೀಗ ಹೊಸದಾಗಿ ದೇವಸ್ಥಾನ ಕಟ್ಟಲು ಮುಂದಾಗಿದ್ದಾರೆ. ಇವರಿಗೆ ಸರ್ಕಾರ ಮತ್ತು ದಾನಿಗಳ ನೆರವು ಅಗತ್ಯವಿದೆ. ಈಗಾಗಲೇ ಚಿಕ್ಕ ದೇವಸ್ಥಾನವನ್ನು ಒಡೆದು ಹಾಕಲಾಗಿದ್ದು, ತಮಿಳುನಾಡಿನ ಶಿಲ್ಪಿಯೊಬ್ಬರಿಗೆ ದೇವಸ್ಥಾನ ಕಟ್ಟಿಕೊಡುವ ಜವಾಬ್ದಾರಿ ನೀಡಲಾಗಿದೆ.
ನಾಗರ ಸರ್ಪ ಕಾವಲು: ಪುರಾತನ ಕಾಲದಿಂದಲೂ ಈ ದೇವಸ್ಥಾನದಲ್ಲಿ ಆಸುಪಾಸಿನಲ್ಲಿ ನಾಗರ ಸರ್ಪ ವಾಸವಾಗಿದೆ ಎಂದು ಹೇಳಲಾಗುತ್ತಿದೆ. ದೇವಸ್ಥಾನ ಒಡೆಯುವಾಗ ಹಾವಿನ ದೊಡ್ಡ ಪೊರೆ ಕಂಡು ಬಂದಿದೆಯಾದರೂ ಈವರೆಗೆ ಭಕ್ತರಿಗೆ ಸಮಸ್ಯೆ ಉಂಟು ಮಾಡಿಲ್ಲ. ಹಲವು ಭಕ್ತರಿಗೆ ದೇವಸ್ಥಾನದ ಬಳಿ ಸರ್ಪ ಕಾಣಿಸಿಕೊಂಡಿದೆ.
50 ವರ್ಷಗಳ ಹಿಂದೆ ವ್ಯಕ್ತಿಯೊಬ್ಬ ಶಿವನ ರೀತಿ ವಸ್ತ್ರಗಳನ್ನು ಧರಿಸಿ ತಲೆ ಮೇಲೆ ಜಡೆ ಕಟ್ಟಿಕೊಂಡು ಹಗಲು-ರಾತ್ರಿ ಈ ಸ್ಥಳದಲ್ಲಿ ಶಿವನ ಧ್ಯಾನ ಮಾಡುತ್ತಿದ್ದರು. ಅದಾದ ಬಳಿಕ ಮಿರ್ಲೆ ಗ್ರಾಮದ ಗೌರಮ್ಮ ಎಂಬ ಮಹಿಳೆ ದೇವಸ್ಥಾನದ ಸೇವೆ ಮಾಡುತ್ತಿದ್ದಾರೆ. ಇದೊಂದು ಪವಿತ್ರ ಸ್ಥಳವಾಗಿರುವುದರಿಂದ ಇಲ್ಲಿ ಮಾಂಸಾಹಾರ ಮಾಡುವಂತಿಲ್ಲ.
ತಲುಪುವ ಮಾರ್ಗ: ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದಿಂದ 3 ಕಿಮೀ ಕಾವೇರಿ ನದಿ ಪಕ್ಕದಲ್ಲೇ ದೇವಸ್ಥಾನ ಇದೆ. ಮೈಸೂರಿನಿಂದ ಕೆ.ಆರ್.ನಗರ ಮಾರ್ಗ, ರಾಮನಾಥಪುರದಿಂದ ಸಾಲಿಗ್ರಾಮ ಮಾರ್ಗ ಹಾಗೂ ಪಿರಿಯಾಪಟ್ಟಣದಿಂದ ಬೆಟ್ಟದಪುರ, ಚುಂಚನಕಟ್ಟೆ ಮಾರ್ಗವಾಗಿ ದೇವಸ್ಥಾನ ತಲುಪಬಹುದು.
ಶತಮಾನಗಳ ಇತಿಹಾಸವಿರುವ ಅಗಸ್ತ್ಯೇಶ್ವರ ದೇವಸ್ಥಾನ ಅಭಿವೃದ್ಧಿಯಾಗಬೇಕು. ನಂಬಿದವರನ್ನು ಈಶ್ವರ ಎಂದಿಗೂ ಕೈಬಿಟ್ಟಿಲ್ಲ. ಮಿರ್ಲೆ ಗ್ರಾಮದ ಶಕ್ತಿ ದೇವರು ಅಗಸ್ತ್ಯೇಶ್ವರ. ಭಕ್ತಿಯಿಂದ ಬೇಡಿದರೆ ಎಲ್ಲರಿಗೂ ವರ ಕರುಣಿಸುತ್ತಾನೆ.
ಸಣ್ಣರಾಮೇಗೌಡ ಭಕ್ತ
ಈ ದೇವಸ್ಥಾನ ಹಲವು ವರ್ಷಗಳಿಂದ ಪಾಳು ಬಿದ್ದಿದೆ. ಗ್ರಾಮಸ್ಥರ ಸಹಕಾರ ಪಡೆದು ಸಮಿತಿ ಮಾಡಿಕೊಂಡು ಅಭಿವೃದ್ಧಿ ಮಾಡಲು ಮುಂದಾಗಿದ್ದೇವೆ. ತಮಿಳುನಾಡಿನ ಶಿಲ್ಪಿ ಕರೆಸಿ ಕಲ್ಲಿನಿಂದ ಕಟ್ಟಲು ಮಾತನಾಡಿದ್ದು ದಾನಿಗಳ ಹುಡುಕಾಟದಲ್ಲಿದ್ದೇವೆ. ನಾವುಗಳು ಸ್ವಂತ ಹಣ ಹಾಕಿ ಸ್ವಚ್ಛತೆ ಮಾಡಿಸಿದ್ದೇವೆ.
ಸಂದೀಪ್ ಖಜಾಂಚಿ, ಅಗಸ್ತ್ಯೇಶ್ವರ ದೇವಾಲಯ ಸಮಿತಿ
ಶತಮಾನಗಳ ಇತಿಹಾಸವಿರುವ, ಪುರಾತನ ಕಾಲದ ದೇವಸ್ಥಾನವನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಗ್ರಾಮದ ಜನರು ತೆಗೆದುಕೊಳ್ಳಬೇಕು. ಶತಮಾನಗಳಿಂದಲೂ ಇಲ್ಲಿ ಪೂಜೆ ನಡೆಯುತ್ತಿದೆ. ಮಿರ್ಲೆ ಜನರ ಅಭಿವೃದ್ಧಿಗೆ ಅಗಸ್ತ್ಯೇಶ್ವರ ಕಾವಲುಗಾರನಾಗಿದ್ದಾನೆೆ. ಗ್ರಾಮದಲ್ಲಿ ಯಾವುದೇ ದುಷ್ಟ ಶಕ್ತಿಗಳ ಕಾಟ ಇಲ್ಲವಾಗಿದೆ. ಭಗವಂತನನ್ನು ನಂಬಿದರೆ ಯಾರನ್ನೂ ಕೈಬಿಡುವುದಿಲ್ಲ.
ಕುಮಾರಸ್ವಾಮಿ ಮುಖ್ಯ ಅರ್ಚಕ, ಹುಣಸಮ್ಮ ದೇವಸ್ಥಾನ