

ಮೈಸೂರು: ಯಾವ ರಾಷ್ಟ್ರಗಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಗೌರವ ದೊರೆಯುತ್ತದೆಯೋ ಆ ರಾಷ್ಟ್ರದ ವೈಭವ, ಗೌರವ ಹೆಚ್ಚುವುದು ಮಾತ್ರವಲ್ಲದೆ, ಸಾಮಾಜಿಕ ಸ್ವಾಸ್ಥೃ ಉತ್ತಮವಾಗಿರುತ್ತದೆ ಎಂದು ವಯಲಿನ್ ವಾದಕ ಡಾ.ಮೈಸೂರು ಮಂಜುನಾಥ್ ಅಭಿಪ್ರಾಯಪಟ್ಟರು.
ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ವಿಶೇಷ ಪರೀಕ್ಷೆಗಳಲ್ಲಿ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ ಮಹಾರಾಜರ ಕಾಲದಲ್ಲಿ ಎಷ್ಟು ಚಿನ್ನಾಭರಣ ಇತ್ತು ಎಂಬುದು ಮುಖ್ಯ ಆಗುತ್ತಿರಲಿಲ್ಲ. ಆ ಸಾಮ್ರಾಜ್ಯದಲ್ಲಿ ಎಂತಹ ಕವಿಗಳು, ವಿದ್ವಾಂಸರು ಇದ್ದರು ಎಂಬುದು ಪ್ರಮುಖವಾಗಿತ್ತು. ಅದೇ ರೀತಿ ದೇಶದ ಭವ್ಯ ಇತಿಹಾಸ ಅಳತೆ ಮಾಡಲು ಸಾಂಸ್ಕೃತಿಕ ಅಂಶಗಳನ್ನು ಪರಿಗಣಿಸಲಾಗುತ್ತದೆ ಎಂದರು.
ಸಂಗೀತ ಹಾಗೂ ನೃತ್ಯ ಕಲೆಗಳು ಎಲ್ಲರನ್ನು ಪ್ರೀತಿಸುವುದನ್ನು ಕಲಿಸುತ್ತದೆ. ಎಲ್ಲರು ಒಂದೇ ಎಂಬ ಭಾವನೆ ಮೂಡಿಸುತ್ತದೆ. ನಾವೆಲ್ಲರು ಒಟ್ಟಿಗೆ ಸಮಾಜಕ್ಕೆ ಹಾಗೂ ರಾಷ್ಟ್ರಕ್ಕೆ ದುಡಿಯೋಣ ಎಂಬ ಸಂದೇಶವನ್ನು ನೀಡುತ್ತದೆ. ವಿದ್ಯಾರ್ಥಿಗಳು ದೇಶದ ಹಿತಕೋಸ್ಕರ ತಮ್ಮ ಬದುಕನ್ನು ಮುಡಿಪಾಗಿ ಇಡಬೇಕು ಎಂದು ಕರೆ ನೀಡಿದರು.
ಸಂಗೀತ ವಿವಿಯು ಈ ಬಾರಿ 12 ಸಾವಿರ ವಿದ್ಯಾರ್ಥಿಗಳಿಗೆ ಸಂಗೀತ ನೃತ್ಯ ಪರೀಕ್ಷೆ ನಡೆಸಿರುವುದು ಸಾಮಾನ್ಯವಾದ ವಿಚಾರವಲ್ಲ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪರೀಕ್ಷೆ ನಡೆಸುವುದು ದೊಡ್ಡ ಕೆಲಸ. ಈ ಪರೀಕ್ಷೆಯಲ್ಲಿ ರ‌್ಯಾಂಕ್ ವಿಜೇತರಿಗೆ ಪ್ರಮಾಣ ಪತ್ರ ನೀಡುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.
ಮಾಧ್ಯಮಗಳ ಅಬ್ಬರದ ನಡುವೆಯೂ ಮಕ್ಕಳು ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಸಂತಸದ ವಿಚಾರ. ಕಲಿತಿರುವ ಈ ಕಲೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಶಾಲೆಗಳ ಪರೀಕ್ಷೆಯನ್ನು ಯಾರು ಬೇಕಾದರೂ ಎದುರಿಸಬಹುದು. ಆದರೆ, ಸಂಗೀತದ ಪರೀಕ್ಷೆ ಎದುರಿಸಲು ವಿಶೇಷವಾದ ಕೌಶಲದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ, ಸಂಗೀತ ವಿಶ್ವವಿದ್ಯಾಲಯ 2009ರಲ್ಲಿ ಪ್ರಾರಂಭಗೊಂಡು ಹಲವು ಏಳು ಬೀಳುಗಳನ್ನು ಕಂಡು 2 ವರ್ಷಗಳಿಂದ ಒಂದಷ್ಟು ಸಾಧನೆ ಮಾಡುತ್ತಿದೆ. ವಿಶ್ವ ವಿದ್ಯಾಲಯದಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿ ಕೊರತೆ ನಡುವೆಯೂ ಉತ್ತಮ ಸಾಧನೆ ತೋರುತ್ತಿದೆ ಎಂದು ಹೇಳಿದರು.
ಸಿಬ್ಬಂದಿ ಕೊರತೆಯಿಂದ ಸಂಗೀತ ನೃತ್ಯಕ್ಕೆ ಸಂಬಂಧಿಸಿದ ವಿಶೇಷ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಸರ್ಕಾರ ಸಂಗೀತ ವಿಶ್ವವಿದ್ಯಾಲ ಯಕ್ಕೆ ನೀಡಿರಲಿಲ್ಲ. ಆದರೆ, ಕಳೆದ ಬಾರಿ ಜವಾಬ್ದಾರಿ ನೀಡಿದಾಗ 18 ಸಾವಿರ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆವು. ಈ ಬಾರಿ 12 ಸಾವಿರ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದ್ದೇವೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಲಿ 67 ವರ್ಷಗಳಿಂದ ಈ ಪರೀಕ್ಷೆಯನ್ನು ನಡೆಸುತಿತ್ತು. 2 ವರ್ಷದಿಂದ ನಾವು ಜವಾಬ್ದಾರಿ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ದೇಶದ 106 ಪ್ರಖ್ಯಾತ ಸಂಗೀತ ವಿದ್ವಾಂಸರು, ನೃತ್ಯ ಕಲಾವಿದರು, ರಂಗಭೂಮಿ, ಜನಪದ ತಜ್ಞರು ನಮ್ಮಲ್ಲಿ ಡಿ.ಲಿಟ್ ಮಾಡುತ್ತಿದ್ದಾರೆ. 87 ಸಂಗೀತ ಸಂಸ್ಥೆಗಳು ನಮ್ಮೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಂಗೀತವನ್ನು ಬೆಳೆಸುವ ಕಾರ್ಯ ಮಾಡುತ್ತಿದ್ದೇವೆ. ಕೇವಲ ರಾಜ್ಯ ಮಾತ್ರವಲ್ಲದೆ ದೇಶ, ವಿದೇಶದಿಂದಲೂ ಈ ರೀತಿಯ ಒಡಂಬಡಿಕೆಗೆ ಬೇಡಿಕೆ ಕೇಳಿ ಬರುತ್ತಿದೆ. ಆದರೆ, ಯುಜಿಸಿಯಲ್ಲಿ ಅದಕ್ಕೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಸೀಮಿತವಾಗಿ ಒಡಂಬಡಿಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಯಾವುದೇ ದೇಶ ಬೆಳವಣಿಗೆ ಹೊಂದಲು ಉನ್ನತ ಶಿಕ್ಷಣ, ಆರೋಗ್ಯ, ಸಂಸ್ಕೃತಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು. ಅಮೆರಿಕ, ಜಪಾನ್, ಜರ್ಮನಿ ಸೇರಿದಂತೆ ಹಲವು ಮುಂದುವರೆದ ರಾಷ್ಟ್ರಗಳು ಶಿಕ್ಷಣ, ಆರೋಗ್ಯ ಮತ್ತು ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಲೆ, ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.
ವಿಶ್ವ ವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಜಿ. ಮಂಜುನಾಥ, ಹಣಕಾಸು ಅಧಿಕಾರಿ ಕೆ.ಎಸ್. ರೇಖಾ ಇದ್ದರು.