

ಮೇಲುಕೋಟೆ: ಇಲ್ಲಿನ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಸೋಮವಾರ ಮಹಾಲಕ್ಷ್ಮೀ ಯದುಗಿರಿನಾಯಕಿ ಅಮ್ಮನವರ ವರ್ಧಂತಿ ವೈಭವದಿಂದ ನೆರವೇರಿತು.
ಇದೇ ವೇಳೆ ಮಹಾಲಕ್ಷ್ಮೀ ಕಲ್ಯಾಣನಾಯಕಿ ಅಮ್ಮನವರಿಗೆ ವಿಶೇಷ ಅಲಂಕಾರ ಸೇವಾರ್ಥಗಳು ನೆರವೇರಿತು. ಇಡೀ ದಿನ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದರು.
ಮೈನಡುಗಿಸುವ ಚಳಿ, ಜಡಿಮಳೆಯ ನಡುವೆಯೂ ಧಾರ್ಮಿಕ ಕೈಂಕರ್ಯ ಶ್ರದ್ಧಾಭಕ್ತಿಯಿಂದ ನೆರವೇರಿತು. ಸ್ಥಾನೀಕರಾದ ಕೋವಿಲ್‌ನಂಬಿ ಮುಕುಂದನ್ ಹಾಗೂ ಪ್ರಸನ್ನಕುಮಾರ್ ಮಹೋತ್ಸವದ ಯಶಸ್ಸಿಗೆ ವಿಶೇಷವಾಗಿ ಶ್ರಮಿಸಿದರು. ಅನೂಚಾನ ಪರಂಪರೆಯಂತೆ ತಿರುವಾಡಿಪ್ಪೂರಂ ಮಹೋತ್ಸವವನ್ನು ಈ ವರ್ಷವೂ ಮೇಲುಕೋಟೆ ದೇವಾಲಯದಲ್ಲಿ ವೈಭವವಾಗಿ ಆಚರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಮಹೋತ್ಸವದ ಅಂಗವಾಗಿ ಕಲ್ಯಾಣನಾಯಕಿ ಅಮ್ಮನವರಿಗೆ ಬೆಳಗ್ಗೆ 8ಗಂಟೆ ವೇಳೆಗೆ ಬೆಳ್ಳಿಯ ದೊಡ್ಡ ಆದಿಶೇಷವಾಹನೋತ್ಸವ ದಿವ್ಯಪ್ರಬಂಧಪಾರಾಯಣ ಹಾಗೂ ಮಂಗಳವಾದ್ಯದೊಂದಿಗೆ ನೆರವೇರಿತು. ನಂತರ ದ್ವಾದಶಾರಾಧನೆಯೊಂದಿಗೆ ಅಭಿಷೇಕ ನೆರವೇರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಏಳು ದಿನಗಳಿಂದ ನಡೆಯುತ್ತಿದ್ದ ತಿರುವಾಡಿಪ್ಪೂರಂ ಕಾರ್ಯಕ್ರಮಗಳ ಅಂಗವಾಗಿ ಕಲ್ಯಾಣನಾಯಕಿ ಅಮ್ಮನವರಿಗೆ ಭಾನುವಾರ ರಾತ್ರಿ ಬಂಗಾರದ ಚಿಕ್ಕಶೇಷಾಲಂಕಾರದೊಂದಿಗೆ ಉತ್ಸವ ನೆರವೇರಿತು.
ವರ್ಧಂತಿ ಮಹೋತ್ಸವ ಅಂಗವಾಗಿ ಅಮ್ಮನವರ ಸನ್ನಿಧಿಯ ಆವರಣವನ್ನು ತಳಿರು ತೋರಣಗಳಿಂದ ಆಕರ್ಷಕವಾಗಿ ಸಿಂಗಾರ ಮಾಡಲಾಗಿತ್ತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.