

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಶ್ರೀ ವೀರಭದ್ರೇಶ್ವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಉದ್ಯಮಿ ಉದಯಕುಮಾರ ಪುರಾಣಿಕಮಠ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಹರ ಹರ ಮಹಾದೇವ, ಶ್ರೀ ವೀರಭದ್ರೇಶ್ವರ ಮಹಾರಾಜ ಕೀ ಜೈ, ಶ್ರೀ ಭದ್ರಕಾಳಿ ಮಾತಾಕಿ ಜೈ ಎಂಬ ಜಯಕಾರ ಮೊಳಗಿಸಿದರು. ಶ್ರೀಮಠದಿಂದ ಹೊರಟ ರಥವು, ಹಳೇ ಹುಬ್ಬಳ್ಳಿ ವೃತ್ತ ತಲುಪಿ ಮರಳಿ ದೇವಸ್ಥಾನಕ್ಕೆ ಆಗಮಿಸಿತು. ದಾರಿಯುದಕ್ಕೂ ಮಂಗಳವಾದ್ಯ, ನಂದಿಕೋಲು ಕುಣಿತ ಜರುಗಿತು.
ಬೆಳಗ್ಗೆ 11ಗಂಟೆ ಸುಮಾರಿಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಸಮಿತಿ ಅಧ್ಯಕ್ಷ ಎನ್.ಎ. ಚರಂತಿಮಠ, ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂದ್ರಶೇಖರ ಮಟ್ಟಿ ಮತ್ತು ಪದಾಧಿಕಾರಿಗಳು ಮೆರವಣಿಗೆ ಉದ್ಘಾಟಿಸಿದರು. ಮೆರವಣಿಗೆಯಲ್ಲಿ 25 ಜೋಡಿ ಎತ್ತುಗಳು, ನಂದಿಕೋಲು ಸೇವೆ, ವೀರಪುರವಂತರು, ಸಂಬಾಳ, ಕರಡಿಮಜಲು, ಕುದುರೆ ಕುಣಿತ ಭಾಗವಹಿಸಿದ್ದವು.
ಪಲ್ಲಕ್ಕಿ ಮೆರವಣಿಗೆಯು ದೇವಸ್ಥಾನದಿಂದ ಹೊರಟು ಬಮ್ಮಾಪುರ ಓಣಿ ಇತರೆಡೆ ಸಂಚರಿಸಿ ಮರಳಿ ದೇವಸ್ಥಾನ ತಲುಪಿತು. ಅಗ್ನಿ ಮಹೋತ್ಸವದ ನಂತರ ರಥೋತ್ಸವ ಅದ್ದೂರಿಯಾಗಿ ನಡೆಯಿತು. ಇದಕ್ಕೂ ಮೊದಲು ಉತ್ಸವ ಮೂರ್ತಿಯನ್ನು ರಥದಲ್ಲಿ ಕೂಡಿಸಲಾಯಿತು.