

ಬೀರೂರು: ಬೀರೂರು ಸಮೀಪದ ಹೊಗರೇಹಳ್ಳಿಯ ಇತಿಹಾಸ ಪ್ರಸಿದ್ದ ಶ್ರೀಲಕ್ಷ್ಮೀ
ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ
ನಡೆಯಿತು.
ಶನಿವಾರದಿಂದ ಧ್ವಜಾರೋಹಣ, ಜಾಂಡೆಗಣ ಏರಿಸುವುದು, ಸಣ್ಣ ಕಂಚಿನ ಗರುಡೋತ್ಸವ,
ದೊಡ್ಡ ಕಂಚಿನ ಗರುಡೋತ್ಸವ, ಭಾನುವಾರ ಕಲ್ಪವೃಕ್ಷ ವಾಹನೋತ್ಸವ, ಕುಂಭಾಭಿಷೇಕ
ಮತ್ತು ಕಲ್ಯಾಣೋತ್ಸವ ನಂತರ ಗಜಾರೋಹಣ ನಡೆಸಿ ರಜತ ನಾಣ್ಯಗಳಿಂದ ಅಭಿಷೇಕ
ನಡೆಸಲಾಯಿತು. ಸೋಮವಾರ ದಿವ್ಯ ಕಲ್ಯಾಣೋತ್ಸವದ ನಂತರ ಶ್ರೀದೇವಿ-ಭೂದೇವಿ
ಸಮೇತ ಶ್ರೀರಂಗನಾಥ ಸ್ವಾಮಿಯನ್ನು ರತ್ನಾಭರಣ, ಗಂಧ ಪುಷ್ಪಾಗಳೊಂದಿಗೆ
ಅಲಂಕೃತಗೊಳಿಸಿ ವೇದ, ಘೋಷ ಮಂಗಳ ವಾದ್ಯಗಳೊಂದಿಗೆ ರಥಾರೋಹಣಕ್ಕಾಗಿ
ಮಂಟಪಕ್ಕೆ ಕರೆತಂದು ಅಲ್ಲಿ ಮಂಟಪಡಿ ಸೇವೆ, ಶ್ರೀಕೃಷ್ಣ ಗಂಧೋತ್ಸವ ನಡೆಸಲಾಯಿತು.
ಹಾಸನ ಸಂಸದ ಶ್ರೇಯಸ್‌ಪಟೇಲ್ ಬಾವುಟವನ್ನು 5ಲಕ್ಷ ರೂ.ಗೆ ಬಿಡ್‌ಮಾಡಿ ಮೊದಲ
ಪೂಜೆ ಸಲ್ಲಿಸುವ ಗೌರವ ಪಡೆದರು. ರಥದಲ್ಲಿದ್ದ ಸ್ವಾಮಿಗೆ ಮಹಾ ಮಂಗಳಾರತಿ ನಡೆಸಿ
ಕದಳಿಚ್ಛೇದನದ ನಂತರ ಮೀಸಲು ಮತ್ತ ಒಕ್ಕಲಿನ ಗ್ರಾಮಗಳ ಭಕ್ತರಿಗೆ ತೆಂಗಿನಕಾಯಿ ನೀಡಿ
ರಥದ ಚಕ್ರಕ್ಕೆ ಸಮರ್ಪಿಸುವಂತೆ ಸೂಚಿಸಲಾಯಿತು.
ಬಿರುದು ಬಾವಲಿಗಳ ನಡೆವೆ ಭಕ್ತರು ವಾದ್ಯಮೇಳಗಳ ಹಿಮ್ಮೇಳದಲ್ಲಿ ಲಕ್ಷ್ಮೀರಂಗನಾಥ ಸ್ವಾಮಿ
ಪಾದಕ್ಕೆ ಗೋವಿಂದ...ಗೋವಿಂದಾ ಎಂದು ರಥವನ್ನು ಎಳೆದರು. ರಥದಲ್ಲಿದ್ದ ಸ್ವಾಮಿಗೆ
ಮಂಗಳಾರತಿ ಅರ್ಪಿಸಿದ ಭಕ್ತರು ಹಣ್ಣು, ಕಾಯಿ ಸಮರ್ಪಿಸಿದರು. ಹರಕೆ ಹೊತ್ತವರು ರಥದ
ಕಲಶಕ್ಕೆ ಬಾಳೆಹಣ್ಣು, ದವನಗಳನ್ನು ಎಸೆದು ಪ್ರಾರ್ಥಿಸಿದರು. ಭಕ್ತರಿಗೆ ಸಿದ್ದೇಶ್ವರ
ಸಮಿತಿಯಿಂದ ಪಾನಕ,ಮಜ್ಜಿಗೆ ವಿತರಿಸಲಾಯಿತು. ದಾಸೋಹದ ಪಂಕ್ತಿಯ ಮೇಲೆ
ನಾಣ್ಯಗಳನ್ನು ಶ್ರೀಸ್ವಾಮಿಯವರ ಹೆಸರಿನಲ್ಲಿ ನೆರೆದಿರುವ ಭಕ್ತಾದಿಗಳಿಗೆ ನೀಡಲಾಯಿತು.