ವಿಜೃಂಭಣೆಯ ಮರೇವಾಡ ಬಸವಣ್ಣ ರಥೋತ್ಸವ

MAREWAD
Published on

ಉಪ್ಪಿನಬೆಟಗೇರಿ: ಹರಹರ ಮಹಾದೇವ... ಶ್ರೀ ಬಸವೇಶ್ವರ ಮಹಾರಾಜಕೀ ಜೈ... ಶ್ರೀ ನಂದೀಶ್ವರ ಮಹಾರಾಜಕೀ ಜೈ.... ಓಂ ನಮಃ ಶಿವಾಯ... ಎಂಬ ಜಯಘೋಷದೊಂದಿಗೆ ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಬಸವಣ್ಣ (ನಂದೀಶ್ವರ) ದೇವರ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.

ಮಳೆಯ ಸಿಂಚನದ ನಡುವೆಯೂ ಭಕ್ತರು ಬಾಳೆಹಣ್ಣು, ಉತ್ತತ್ತಿ, ಲಿಂಬೆಹಣ್ಣುಗಳನ್ನು ತೇರಿಗೆ ಎಸೆದು ಭಕ್ತಿ ಸಮರ್ಪಿಸಿದರು.

ಅಮ್ಮಿನಬಾವಿ ಗ್ರಾಮದ ಬಸವಣ್ಣ (ನಂದೀಶ್ವರ) ದೇವರ ದೇವಾಲಯದ ಪಲ್ಲಕ್ಕಿ, ನಂದಿಕೋಲು, ದೀವಟಿಗೆ ಆಗಮಿಸುತ್ತಿದ್ದಂತೆ ಅಲಂಕೃತ ತೇರಿಗೆ ಸೋಮಲಿಂಗಶಾಸ್ತ್ರಿ ಗುಡ್ಡದಮಠ, ಶೇಖಯ್ಯ ಹಿರೇಮಠ ಹಾಗೂ ಅಂಕಲಯ್ಯ ಯರಗಂಬಳಿಮಠ ಅವರು ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ದೊರೆಯಿತು. ಕರಡಿಮಜಲು, ಜಾಂಜ್, ಶಿವಭಜನೆ ಸೇರಿದಂತೆ ವಿವಿಧ ಜಾನಪದ ವಾದ್ಯ ಮೇಳಗಳು ರಥೋತ್ಸವಕ್ಕೆ ಮೆರಗು ತುಂದವು.

ಕಾರ್ಣಿಕ: ರಥೋತ್ಸವದ ಕೊನೆಯಲ್ಲಿ ಅಮ್ಮಿನಬಾವಿ ಬಸವಣ್ಣ (ನಂದೀಶ್ವರ) ದೇವರ ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಪೂಜಾರ ಅವರು ‘ಮಳಿ ಬೆಳಿ ಸಂಪೈತ್ರಿಪೋ... ಗುಡುಗು ಸಿಡ್ಲು ಭಾಳ ಐತ್ರಿಪೋ... ಹುಟ್ಟಿದ ಕೂಸಿಗೆ ಬಲಾ ಇಲ್ರಿಪೋ... ರಕ್ತದ ಕಾವಲಿ ಹರಿತೇತ್ರಿಪೋ...’ ಎಂದು ಕಾರ್ಣಿಕ ನುಡಿದರು.

ಜಾತ್ರೆಯ ಅಂಗವಾಗಿ ಬೆಳಗ್ಗೆ ಶ್ರೀ ನಂದೀಶ್ವರನ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ವಿಶೇಷ ಪುಷ್ಪಾಲಂಕಾರ ಪೂಜೆ ಜರುಗಿತು. ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಅಭಿನವ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಮ್ಮಿನಬಾವಿ, ತಿಮ್ಮಾಪೂರ, ಧಾರವಾಡ, ಸೇರಿದಂತೆ ಸುತ್ತಲಿನ ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net