

ಕಡೂರು: ತಾಲೂಕಿನ ಇತಿಹಾಸ ಪ್ರಸಿದ್ಧ ಯಗಟಿಪುರದ ಶ್ರೀಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ಪಿ.ಕೋಡಿಹಳ್ಳಿ ಗ್ರಾಮದಿಂದ ಮೂಲ್ವಿಕರ ಮೂರು ಬಂಡಿಗಳು ಹಾಗೂ ಗ್ರಾಮ ದೇವತೆಗಳು ಆಗಮನಗೊಂಡ ಹಿನ್ನಲೆಯಲ್ಲಿ ಬಾಯಿಬೀಗ ಹಾಕಿಕೊಂಡ ಸಾವಿರಾರು ಮಹಿಳೆಯರು ಕೆಂಡ ಹಾಯುವ ಮೂಲಕ ಸ್ವಾಮಿ ದರ್ಶನ ಪಡೆದರು. ನಂತರ ಪುರದ ಮಲ್ಲಿಕಾರ್ಜುನ ಸ್ವಾಮಿ ವ್ಯವಸ್ಥಾಪನಾ ಸಮಿತಿಯಿಂದ ಉಪವಾಸ ವೃತ ಕೈಗೊಂಡಿದ್ದ ಮಹಿಳೆಯರಿಗೆ ಫಲಹಾರ ವಿತರಿಸಲಾಯಿತು.
ನಂತರ ಮೂಲ್ವೀಕರ ಮುದ್ರೆಯ್ಯನಾರು ಪೂಜಾರುಗಳಿಂದ ಒಂಬತ್ತು ವರ್ಷಕ್ಕೊಮ್ಮೆ ಸ್ವಾಮಿಯ ಗರ್ಭಗುಡಿಗೆ ಸಂಪ್ರಾದಾಯಿಕ ಪದ್ದತಿಯಂತೆ ಪ್ರವೇಶಗೊಂಡು ಮೂಲ ಉದ್ಬವ ಲಿಂಗಕ್ಕೆ ವಿಶೇಷ ರುದ್ರಾಭಿಷೇಕ, ನೈವೇದ್ಯ ಸಂಕಲ್ಪ ಸೇವೆಗಳನ್ನು ನೆರವೇರಿಸಲಾಯಿತು. ನಂತರ ಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಗಜಾರೋಹಣೋತ್ಸವ ಮತ್ತು ಕೃಷ್ಣ ಗಂಧೋತ್ಸವ ಸಾಂಪ್ರದಾಯಿಕ ಉತ್ಸವಗಳು ನೆರವೇರಿಸಲಾಯಿತು. ನಂತರ ಪಿ.ಕೋಡಿಹಳ್ಳಿಯ ಮೂಲ್ವಿಕರು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದ ಮಂಟಪಕ್ಕೆ ಕರೆತಂದು ಅಲಂಕೃತ ರಥದಲ್ಲಿ ಸ್ವಾಮಿ ಪ್ರತಿಷ್ಟಾಪಿಸಿ ವಿಧಿ ವಿಧಾನಗಳ ಬಲಿಪೂಜೆ ನಡೆಸಿದರು. ಮಧ್ಯಾಹ್ನ 2 ಗಂಟೆ ಬಳಿಕ ನೆರೆದಿದ್ದ ಸಹಸ್ರರಾರು ರಥವನ್ನು ಎಳೆದು ಸಂಭ್ರಮಿಸಿದರು.
ರಥ ಎಳೆಯುವ ಸಂದರ್ಭದಲ್ಲಿ ಭಕ್ತರು ಮಲ್ಲಪ್ಪನಿಗೆ ಜೈಕಾರ ಕೂಗುತ್ತಾ ಈ ಬಾರಿಯ ತಾಲೂಕಿಗೆ ಸಮೃದ್ಧ ಮಳೆ-ಬೆಳೆ ಕರುಣಿಸುವಂತೆ ಪ್ರಾರ್ಥಿಸಿ ಬಾಳೆಹಣ್ಣುಗಳನ್ನು ಎಸೆದರು. ಕೆಲವರು ವೈಯಕ್ತಿಕ ಹರಕೆ ಕಟ್ಟಿಕೊಂಡ ಭಕ್ತರು ಮಂಡಕ್ಕಿ ಜತೆಗೆ ಮೆಣಸಿನ ಕಾಳನ್ನು ರಥಕ್ಕೆ ಎರೆಚಿ ತಮ್ಮ ಭಕ್ತಿ ಸಮರ್ಪಿಸಿದರು. ರಥದ ಬಳಿ ಮೆಣಸಿನ ಕಾಳನ್ನು ರೈತಾಪಿ ವರ್ಗ ಮುಗಿಬಿದ್ದು ಸಂಗ್ರಹಿಸಿದರು. ಹೀಗೆ ಸಂಗ್ರಹಿಸಿದ ಮೆಣಸಿನಕಾಳನ್ನು ಮನೆಗಳಲ್ಲಿ ಪೂಜೆ ಸಲ್ಲಿಸಿ ಹೊಲ-ತೋಟಗಳಲ್ಲಿ ಸಮೃದ್ಧ ಪೈರು ಬೆಳೆಯುವಂತೆ ಪ್ರಾರ್ಥಿಸಿ ಮೆಣಸಿನಕಾಳನ್ನು ಜಮೀನುಗಳಿಗೆ ಹಾಕಲಾಗುತ್ತದೆ.