ವೈಭವದ ಮಲೆ ಮಹದೇಶ್ವರ ಉತ್ಸವ

25 KRN-1
ಕೆ.ಆರ್.ನಗರದಲ್ಲಿ ಜರುಗಿದ ಮಲೆ ಮಹದೇಶ್ವರ ದೇವಾಲಯದ 54ನೇ ವರ್ಷದ ಉತ್ಸವಕ್ಕೆ ವಿವಿಧ ಮಠಾಧಿಪತಿಗಳಿಂದ ಚಾಲನೆ ದೊರೆಯಿತು. ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ, ಶಾಸಕ ಡಿ.ರವಿಶಂಕರ್, ನಟರಾಜ ಶ್ರೀ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚನ್ನವೀರದೇಶಿಕೇಂದ್ರ ಸ್ವಾಮೀಜಿ ಶರಣೆ ಜಯದೇವಿ ತಾಯಿ ಸಿದ್ದೇಶ್ವರ ಸ್ವಾಮಿ, ಕೆ.ಎನ್.ಬಸಂತ್ ಇನ್ನಿತರರು ಇದ್ದರು.
Published on

 ಕೆ.ಆರ್.ನಗರ: ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಮಲೆ ಮಹದೇಶ್ವರ ದೇವಾಲಯದ 54ನೇ ವರ್ಷದ ಉತ್ಸವ ಸೋಮವಾರ ಅತ್ಯಂತ ವೈಭವದಿಂದ ಜರುಗಿತು.

ಉತ್ಸವಕ್ಕೆ ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಶ್ರೀಗಳು, ಕರ್ಪೂರವಳ್ಳಿ ಜಂಗಮ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಟ್ಟದಪುರ ವಿರಕ್ತ ಮಠದ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ, ಲಾಳನಹಳ್ಳಿ ಮಠದ ಶರಣೆ ಜಯದೇವಿ ತಾಯಿ, ಅರಕೆರೆ ವಿರಕ್ತ ಮಠದ ಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು.

ಉತ್ಸವದಲ್ಲಿ ಮುಖ್ಯಅತಿಥಿಯಾಗಿದ್ದ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಮಾತನಾಡಿ, ನಮ್ಮ ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳ ಉಳಿವಿಗೆ ಜಾತ್ರೆ, ಉತ್ಸವ, ಧಾರ್ಮಿಕ ಮಹೋತ್ಸವಗಳು ಸಾಕ್ಷಿಯಾಗಿವೆ. ಕಾರ್ತಿಕ ಮಾಸ ಬೆಳಕಿನ ಹಬ್ಬವಾಗಿದ್ದು, ಅದು ನಮ್ಮಲ್ಲಿ ಇರುವ ಅಜ್ಞಾನವೆಂಬ ಅಂಧಕಾರ ತೊಡೆದು ಹಾಕಿ, ಸುಜ್ಞಾನದ ಬೆಳಕನ್ನು ಬೆಳಗುತ್ತದೆ. ಈ ಸಮಯದಲ್ಲಿ ವಿವಿಧ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಲಕ್ಷ ದೀಪೋತ್ಸವ ಮತ್ತು ಉತ್ಸವಗಳು ನಡೆದು ಧಾರ್ಮಿಕ ವಿಚಾರಗಳ ವಿನಿಮಯಗಳ ಮೂಲಕ ಸಹಬಾಳ್ವೆಯ ಮಹತ್ವ ಸಾರುವ ಮಾಸವಾಗಿದೆ ಎಂದು ಹೇಳಿದರು.

ಶಾಸಕ ಡಿ.ರವಿಶಂಕರ್ ಮಾತನಾಡಿ, ಇಲ್ಲಿನ ಬಸವೇಶ್ವರ ಬಡಾವಣೆಯಲ್ಲಿ ನಡೆಯುವ ಕಡೇ ಕಾರ್ತಿಕ ಸೋಮವಾರದ ಮಹದೇಶ್ವರಸ್ವಾಮಿಯ ಉತ್ಸವಕ್ಕೆ ದಶಕಗಳ ಇತಿಹಾಸವಿದೆ. ಪ್ರತಿ ವರ್ಷ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ, ತಮ್ಮ ಇಷ್ಟಾರ್ಥ ಸಿದ್ಧ್ದಿಗಾಗಿ ಪೂಜೆ ಸಲ್ಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಉತ್ಸವವನ್ನು ಮತ್ತಷ್ಟು ವೈಭವದಿಂದ ಆಚರಿಸೋಣ ಎಂದರು.

ಉತ್ಸವದ ಅಂಗವಾಗಿ ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಅಲ್ಲದೆ ದೇವಾಲಯದ ಒಳಾಂಗಣವನ್ನು ಬಗೆಗೆಯ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಜತೆಗೆ ಮಹದೇಶ್ವರಸ್ವಾಮಿಗೆ ಪುಷ್ಪಾಲಂಕಾರ ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ಸಾಗಿ ದೇವರ ದರ್ಶನ ಪಡೆದರು.

ದೇವಾಲಯದ ಬಳಿಯಿಂದ ಹೊರಟ ಮಲೆ ಮಹದೇಶ್ವರ ಸ್ವಾಮಿಯ ಮುತ್ತಿನ ಪಲ್ಲಕ್ಕಿ ಉತ್ಸವ ಬಸವೇಶ್ವರ ಬಡಾವಣೆ, ಮೈಸೂರು-ಹಾಸನ ಮುಖ್ಯ ರಸ್ತೆ, ಬಜಾರ್ ರಸ್ತೆ, 7ನೇ ರಸ್ತೆಯ ಮೂಲಕ ದೇವಾಲಯದವರೆಗೆ ಸಾವಿರಾರು ಮಂದಿ ಭಕ್ತರ ಜಯಘೋಷದ ನಡುವೆ ನಡೆಯಿತು.

ಮೆರವಣಿಗೆಯಲ್ಲಿ ನಂದಿಧ್ವಜ, ನಾಸಿಕ್ ಬ್ಯಾಂಡ್, ಪೂಜಾ ಕುಣಿತ, ವೀರಭದ್ರಕುಣಿತ, ತಮಟೆ ಪ್ರದರ್ಶನ, ಚಂಡೆಮೇಳ, ಮಂಗಳವಾದ್ಯ, ಕಂಸಾಳೆ, ವೀರಗಾಸೆ, ಹುಲಿವೇಷ, ಡೊಳ್ಳುಕುಣಿತ, ಗೊಂಬೆಕುಣಿತ, ಯಕ್ಷಗಾನ ಮತ್ತು ಕೀಲುಕುದುರೆ, ಕಲಾವಿದರು ಎಲ್ಲರ ಗಮನ ಸೆಳೆದರು. ಸಂಜೆ ಬಸವೇಶ್ವರ ದೇವಾಲಯದ ಮುಂಭಾಗ ಕೊಂಡೋತ್ಸವ ಜರುಗಿತು.

ನಂತರ ಶಿವಾನುಭವ ಕಲ್ಯಾಣ ಮಂಟಪದ ಆವರಣದಲ್ಲಿ ಪಟಾಕಿ ಪ್ರದರ್ಶನ ನಡೆಸಿ ದೇವೀರಮ್ಮ ಶಿಶುವಿಹಾರದ ಮೈದಾನದಲ್ಲಿ ಅನ್ನದಾಸೋಹ ಏರ್ಪಡಿಸಾಗಿತ್ತು. ಕೆ.ಆರ್.ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ನವ ನಗರ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಪುರಸಭೆ ಸದಸ್ಯರಾದ ಮಂಜುಳಾ ಚಿಕ್ಕವೀರು, ವೀಣಾ ವೃಷಬೇಂದ್ರ, ಕೆ.ಪಿ.ಪ್ರಭುಶಂಕರ್, ನಟರಾಜು, ತೋಂಟದಾರ್ಯ, ಮಾಜಿ ಅಧ್ಯಕ್ಷೆ ಹರ್ಷಲತಾ ಶ್ರೀಕಾಂತ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್‌ಕುಮಾರ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಯುವ ಕಾಂಗ್ರೆಸ್ ನಗರಾಧ್ಯಕ್ಷ ಕೆಂಚಿ ಮಂಜು, ಮುಖಂಡರಾದ ಗಣೇಶ್, ಮಾದೇಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net