ವಿಜೃಂಭಣೆಯ ಶ್ರೀ ಫಕೀರೇಶ್ವರ ಮಹಾರಥೋತ್ಸವ

fakireshwar
Published on

ಹುಬ್ಬಳ್ಳಿ: ಹಿಂದು ಮುಸ್ಲಿಂ ಸಾಮರಸ್ಯದ ಪ್ರತೀಕವಾಗಿರುವ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಜಗದ್ಗುರು ಶ್ರೀ ಫಕೀರೇಶ್ವರ ಮಹಾರಥೋತ್ಸವ ಸಹಸ್ರಾರು ಭಕ್ತರ ಮಧ್ಯೆ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ರಂಗು ರಂಗಿನ ನೂರಾರು ಧ್ವಜ, ಹೂ ಹಾಗೂ ರುದ್ರಾಕ್ಷಿಯ ಬೃಹತ್ ಮಾಲೆಗಳಿಂದ ಅಲಂಕೃತಗೊಂಡ ರಥೋತ್ಸವಕ್ಕೆ ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಅಪಾರ ಭಕ್ತ ಸಮೂಹ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಹರ ಹರ ಮಹಾದೇವ. ಫಕೀರ ಸ್ವಾಮಿಕೀ ದೋಸ್ತರಾ ಹೊದೀನ್, ಫಕೀರೇಶ್ವರ ಮಹಾರಾಜ ಕೀ ಜೈ ಎಂಬ ಜೈಕಾರ ಮೊಳಗಿದವು. ಶ್ರೀಮಠದಿಂದ ಆರಂಭವಾದ ರಥೋತ್ಸವ ಗ್ರಾಮದ ಪೇಟೆ ರಸ್ತೆ ಮಾರ್ಗವಾಗಿ ಬ್ರಹ್ಮದೇವರ ದೇವಸ್ಥಾನವರೆಗೆ ಸಂಚರಿಸಿ, ಪುನಃ ಮಠಕ್ಕೆ ಆಗಮಿಸಿತು.

ಸಂಗೀತ ವಾದ್ಯಗಳ ಮೆರುಗು: ಸಿಂಗರಿಸಿದ ಕೃತಕ ಆನೆ, ಕುದುರೆ, ಝಾಂಜ್, ಡೊಳ್ಳು ಸೇರಿ ವಿವಿಧ ವಾದ್ಯ ವೈಭವಗಳು ರಥೋತ್ಸವಕ್ಕೆ ಮೆರುಗು ತಂದವು. ಸಂಗೀತಕ್ಕೆ ಹೆಜ್ಜೆ ಹಾಕಿ ಯುವಕರು ಸಂಭ್ರಮಿಸಿದರು. ವಿಶೇಷ ಪೂಜೆ: ಜಾತ್ರೆ ಅಂಗವಾಗಿ ಬೆಳಗ್ಗೆ ಶ್ರೀಮಠದಲ್ಲಿ ಫಕೀರೇಶ್ವರ ಗದ್ದುಗೆಗೆ ಪುಷ್ಪಾರ್ಚನೆ, ಬಿಲ್ವಾರ್ಚನೆ, ಅಭಿಷೇಕ, ಪೂಜೆ ಸಲ್ಲಿಸಿ ವಿವಿಧ ಹೂಗಳಿಂದ ವಿಶೇಷ ಅಲಂಕಾರ ನೆರವೇರಿಸಲಾಯಿತು. ಶ್ರೀಗಳ ಬಿನ್ನಾಯ: ವಾದ್ಯ ವೈಭವ ಹಾಗೂ ಭಕ್ತರೊಂದಿಗೆ ಪಲ್ಲಕ್ಕಿ ಉತ್ಸವದಲ್ಲಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಸಂಚರಿಸಿದ ಫಕೀರ ಸಿದ್ಧರಾಮ ಸ್ವಾಮೀಜಿಯವರು ಸ್ಥಳೀಯ ಶಿವಾನಂದ ಪೂಜಾರ ಅವರ ಮನೆಯಲ್ಲಿ ಬಿನ್ನಾಯ ಮಾಡಿದರು.

ನಾಡಿನಾದ್ಯಂತ ದ್ವೇಷಬಿಡು ಪ್ರೀತಿ ಮಾಡು ಎಂಬ ತತ್ವ ಬೋಧನೆ ಜತೆಗೆ ಹಿಂದು ಮುಸ್ಲಿಂ ಭಾವೈಕ್ಯ ಮೂಡಿಸುತ್ತಿರುವ ಗ್ರಾಮದ ಶ್ರೀ ಫಕೀರೇಶ್ವರರ ಮಹಾರಥೋತ್ಸವ ಧರ್ಮ ಜಾಗೃತಿ ಸಂದೇಶ ಸಾರಿತು. ನಮ್ಮ ಪರಂಪರಾಗತ ಸಂಸ್ಕೃತಿ, ಪರಂಪರೆಗಳ ಉಳಿವಿಗೆ ಮಠಗಳ ಕೊಡುಗೆ ಅಪಾರ. ಮಹಾತ್ಮರ ವಚನಗಳಿಂದ ಬದುಕು ಸನ್ಮಾರ್ಗದತ್ತ ಸಾಗಲು ಸಾಧ್ಯವಾಗುತ್ತದೆ. ಎ.ಬಿ. ಉಪ್ಪಿನ, ಅಧ್ಯಕ್ಷರು ಸ್ಥಾನಿಕ ಆಡಳಿತ ಮಂಡಳಿ ಕೆಎಲ್‌ಇ ಕಾಲೇಜು ಸಂಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net