

ಬಾಳೆಹೊನ್ನೂರು: ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗಣೇಶೋತ್ಸವದಲ್ಲಿ ಒಂದಾದ ಇಲ್ಲಿನ ವಿದ್ಯಾಗಣಪತಿ ಸೇವಾ ಸಮಿತಿ 15 ದಿನಗಳಿಂದ ಆಯೋಜಿಸಿದ್ದ 67ನೇ ಸಾರ್ವಜನಿಕ ಗಣೇಶೋತ್ಸವಕ್ಕೆ ಬುಧವಾರ ವೈಭವದ ತೆರೆ ಬಿದ್ದಿದೆ.
15 ದಿನ ಗಣಹೋಮ, ಭಜನೆ, ಸುಗಮ ಸಂಗೀತ, ಭರತನಾಟ್ಯ, ನೃತ್ಯರೂಪಕ, ಕನ್ನಡ, ತುಳು ನಾಟಕ, ಯಕ್ಷಗಾನ, ಆರ್ಕೆಸ್ಟ್ರಾ, ವಿನೂತನ ನೃತ್ಯ ಕಾರ್ಯಕ್ರಮ, ಶಾಲಾ ಮಕ್ಕಳ ಜಾನಪದ, ಸಿನಿಮಾ ನೃತ್ಯ ಸ್ಪರ್ಧೆ, ಸಾರ್ವಜನಿಕರ ನೃತ್ಯ, ಗಾಯನ ಸ್ಪರ್ಧೆಗಳು ಸೇರಿದಂತೆ ವಿವಿಧ ಟಿವಿ ವಾಹಿನಿಗಳ ನಟ, ಕಲಾವಿದರ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ನೆಲಮಂಗಲ ಶಿವಗಂಗಾ ಕ್ಷೇತ್ರದ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠದ ಡಾ.ಮಲಯಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀವರ್ಚನ ನೀಡಿದರು. ವಿಸರ್ಜನಾ ದಿನವಾದ ಬುಧವಾರ 15 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಮೆರವಣಿಗೆ ಕಲಾರಂಗ ಕ್ರೀಡಾಂಗಣದಿಂದ ಹೊರಟು ಕೊಪ್ಪ ರಸ್ತೆಯ ರಂಭಾಪುರಿ ಪೆಟ್ರೋಲ್ ಬಂಕ್ ತಲುಪಿ, ಮುಖ್ಯರಸ್ತೆಯಲ್ಲಿ ಬಸ್ ನಿಲ್ದಾಣ, ಜೇಸಿ ವೃತ್ತ, ರೋಟರಿ ವೃತ್ತಕ್ಕೆ ತಲುಪಿತು.ಮೆರವಣಿಗೆ ಮುಖ್ಯರಸ್ತೆಯಲ್ಲಿ ಬರುತ್ತಿದ್ದಂತೆ ನೂರಾರು ಜನ ವರ್ತಕರು ತೆಂಗಿನ ಕಾಯಿ ಒಡೆದು, ಪಟಾಕಿ ಸಿಡಿಸಿ ಹಾಗೂ ಬೃಹತ್ ಹಾರಗಳನ್ನು ಹಾಕುವ ಮೂಲಕ ಪೂಜೆ ಸಲ್ಲಿಸಿದರು. ಹಲವು ಕಡೆಗಳಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಅವಲಕ್ಕಿ, ಸಿಹಿ, ಪಾನೀಯ ನೀಡಲಾಯಿತು. ಮೆರವಣಿಗೆ ನಂತರ ಭದ್ರಾನದಿಯಲ್ಲಿ ಗಣೇಶನನ್ನು ವಿಸರ್ಜಿಸುವ ಮೂಲಕ ಗಣೇಶೋತ್ಸವಕ್ಕೆ ವೈಭವದ ತೆರೆ ಕಂಡಿತು.
ಅನ್ನದಾನ ಸಮಿತಿಯ ಪ್ರಮುಖರಾದ ಎಂ.ಎಸ್.ಅರುಣೇಶ್, ಸಮಿತಿ ಅಧ್ಯಕ್ಷ ಕೆ.ಎಸ್.ಚನ್ನಗಿರಿ ನೇತೃತ್ವದಲ್ಲಿ ಸಮಿತಿಯ ಸದಸ್ಯರು ಅನ್ನ ಸಂತರ್ಪಣೆ ಸೇವೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.