ಸಾರಿಗೆ ಸಂಸ್ಥೆಯ ಬಸ್ಸಿನ ಗಾಜು ಪುಡಿಪುಡಿ

ksrtc bus
Published on

ಉಪ್ಪಿನಬೆಟಗೇರಿ: ನಿಲ್ದಾಣದಲ್ಲಿ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕಿಡಿಗೇಡಿಯೊಬ್ಬ ಬಸ್‌ನ ಹಿಂಬದಿ ಗ್ಲಾಸ್‌ಗೆ ಕಲ್ಲೆಸೆದ ಪರಿಣಾಮ ಇಡೀ ಗಾಜು ಪುಡಿ ಪುಡಿಯಾದ ಘಟನೆ ಗ್ರಾಮದಲ್ಲಿ ಬುಧುವಾರ ನಡೆದಿದೆ.

ಧಾರವಾಡ ಡಿಪೋಗೆ ಸೇರಿದ ಬೈಲಹೊಂಗಲ್ ಕಡೆಯಿಂದ ಧಾರವಾಡಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಉಪ್ಪಿನಬೆಟಗೇರಿ ಗ್ರಾಮದ ಮೂರಕಲ್ ಅಗಸಿಯ ತಂಗುದಾಣಕ್ಕೆ ಆಗಮಿಸುತ್ತಿದ್ದಂತೆ ಪ್ರಯಾಣಿಕರು ನಿಲ್ಲಿಸುವಂತೆ ಕೈ ಮಾಡಿದರೂ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಹಿಂಬದಿಯಿಂದ ಕಲ್ಲು ಎಸೆದಿದ್ದಾನೆ. ಇದರಿಂದ ಬಸ್ಸಿನ ಗಾಜು ಸಂಪೂರ್ಣ ಒಡೆದು ಹೋಗಿದೆ. ಚಾಲಕ ಸ್ಥಳದಲ್ಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಬೇರೆ ಬಸ್‌ಗೆ ಹತ್ತಿಸಿ ಕಳುಹಿಸಿದ್ದಾರೆ. ಗರಗ ಠಾಣೆ ಪೊಲೀಸರು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.

ಈ ವೇಳೆ ಗ್ರಾಮಸ್ಥರು ‘ಉಪ್ಪಿನಬೆಟಗೇರಿ ಗ್ರಾಮಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ಬಂದ ಕೆಲವು ಬಸ್‌ಗಳು ಸರಿಯಾಗಿ ನಿಲುಗಡೆಯಾಗುತ್ತಿಲ್ಲ ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net